ADVERTISEMENT

ಕನ್ನಡ ಭಾಷೆಯ ದುಸ್ಥಿತಿಗೆ ಕನ್ನಡಿಗರೇ ಕಾರಣ: ಸಂತೋಷ ಹಾನಗಲ್ಲ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 12:23 IST
Last Updated 24 ಮಾರ್ಚ್ 2023, 12:23 IST
ಸಂತೋಷ ಹಾನಗಲ್ಲ
ಸಂತೋಷ ಹಾನಗಲ್ಲ   

ಹುಬ್ಬಳ್ಳಿ: ‘ಕನ್ನಡ ಭಾಷೆಗೆ ಇಂದು ಒದಗಿಬಂದಿರುವ ದುಸ್ಥಿತಿಗೆ ಅನ್ಯಭಾಷಿಕರಲ್ಲ, ಸ್ವತಃ ಕನ್ನಡಿಗರೇ ಕಾರಣ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಹೇಳಿದರು.

ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಗೋಷ್ಠಿಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ– 2023 ಕುರಿತು ಅವರು ಮಾತನಾಡಿದರು.

ಕನ್ನಡಿಗರು ಬೇರೆ ಭಾಷೆಗಳನ್ನು ಬೇಗ ಕಲಿತು ಅವರೊಂದಿಗೆ ಸಲೀಸಾಗಿ ವ್ಯವಹರಿಸಿಬಿಡುತ್ತಾರೆ. ಅನ್ಯಭಾಷಿಕರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಉಂಟಾಗುವುದಿಲ್ಲ. ಇದರಿಂದಾಗಿ ಕನ್ನಡ ಭಾಷೆ ಬೆಳೆಯುತ್ತಿಲ್ಲ ಎಂದು ಅವರು ವಿಷಾದಿಸಿದರು.

ADVERTISEMENT

ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. 1963ರಲ್ಲಿ ಕನ್ನಡವೇ ರಾಜ್ಯ ಭಾಷೆ ಎಂದು ಅಂದಿನ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು. 1983ರಲ್ಲಿ ಕನ್ನಡ ಕಾವಲು ಸಮಿತಿ ರಚಿಸಲಾಗಿತ್ತು. ಕನ್ನಡ ಭಾಷೆ ಗಟ್ಟಿಗೊಳಿಸಲು ಇದುವರೆಗೆ ಸರ್ಕಾರಗಳು 375 ಕನ್ನಡ ಪರ ಆದೇಶಗಳನ್ನು ಹೊರಡಿಸಿವೆ. ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಲು ಸಲ್ಲಿಕೆಯಾದ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಇದರ ಆಧಾರದ ಮೇಲೆ ಕಾನೂನು ರಚಿಸುವುದಷ್ಟೇ ಬಾಕಿ ಇದೆ ಎಂದರು.

ಕನ್ನಡ ಉಳಿಸಿ– ಬೆಳೆಸುವ ನಿಟ್ಟಿನಲ್ಲಿ ಎಲ್ಲ ಜವಾಬ್ದಾರಿಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸರ್ಕಾರದ ಮೇಲೆ ಹಾಕುವುದನ್ನು ನಿಲ್ಲಿಸಬೇಕು. ಭಾಷೆ ಬಳಸುವುದನ್ನು ಮುಂದುವರಿಸಬೇಕು ಹಾಗೂ ಅನ್ಯಭಾಷಿಕರಿಗೆ ಕಲಿಸಿಕೊಡುವ ಕಾಯಕವನ್ನು ಮಾಡುವ ಮೂಲಕ ಕನ್ನಡಿಗರು ಭಾಷೆ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ– 2023 ಅಂಗೀಕರಿಸಲಾಗಿದೆ. ಇದರ ನಿಯಮಾವಳಿಗಳನ್ನು ರಚಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

ರಂಜಾನ್‌ ಕಿಲ್ಲೇದಾರ ಸ್ವಾಗತಿಸಿದರು. ಮಹೇಶ ಪತ್ತಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.