ಹುಬ್ಬಳ್ಳಿ: ಪ್ರತಿ ವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತದೆ. ಜೊತೆಗೆ ಅನುದಾನ ಬಿಡುಗಡೆ ಆಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅದು ಘೋಷಣೆಗೆ ಮಾತ್ರ ಸೀಮಿತವಾಗುತ್ತದೆ. ಹುಬ್ಬಳ್ಳಿ– ಧಾರವಾಡಕ್ಕೆ ಸಂಬಂಧಿಸಿದಂತೆ ಬಹುತೇಕ ಯೋಜನೆಗಳ ಸ್ಥಿತಿಯೂ ಇದೇ ರೀತಿಯಿದೆ ಎಂಬ ಬೇಸರ ಜನರಲ್ಲಿದೆ.
ಧಾರವಾಡ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಕಳಸಾ– ಬಂಡೂರಿ ನಾಲಾ ಯೋಜನೆ ಅನುಷ್ಠಾನದ ಕುರಿತು ಹಲವು ವರ್ಷಗಳಿಂದ ಬಜೆಟ್‌ನಲ್ಲಿ ಘೋಷಿಸ
ಲಾಗುತ್ತಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು 2020–21ರ ಬಜೆಟ್‌ನಲ್ಲಿ ₹500 ಕೋಟಿ, 2022–23ರ ಬಜೆಟ್‌ನಲ್ಲಿ ₹1,000 ಕೋಟಿ ಘೋಷಿಸಲಾಗಿತ್ತು. ಆದರೆ, ಈವರೆಗೆ ಕಾಮಗಾರಿ ಆರಂಭ
ವಾಗಿಲ್ಲ. ಇದೇ ರೀತಿ, ಕಾಳಿ ನದಿ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ ಕೈಗೊಳ್ಳು
ವುದಾಗಿ 2022–23ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ.
2020–21ರ ಬಜೆಟ್‌ನಲ್ಲಿ ಶುದ್ಧೀಕರಿಸಿದ ನೀರು ಗೃಹಯೇತರ ಉದ್ದೇಶಕ್ಕಾಗಿ ಮರುಬಳಕೆ ಮಾಡುವ ಯೋಜನೆಯನ್ನು ರೂಪಿಸಲಾಗಿತ್ತು. ಇದಕ್ಕಾಗಿ ಹುಬ್ಬಳ್ಳಿ–ಧಾರವಾಡಆಯ್ಕೆ ಮಾಡಲಾಗಿತ್ತು. ಅಂದಾಜು ₹20 ಕೋಟಿ ವೆಚ್ಚದ ಈ ಯೋಜನೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆಗಳ ನಿಗಮಗಳಿಗೆ ಸುಮಾರು 2,450 ಬಸ್ ಖರೀದಿಸುವುದಾಗಿ 2021–22ರಲ್ಲಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಇದು ಕೂಡ ಸಾಕಾರ
ಗೊಂಡಿಲ್ಲ ಎಂಬ ಬೇಸರ ಈ ಭಾಗದ ಜನರಲ್ಲಿದೆ.
2015–16ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಒದಗಿಸಿದ ₹1 ಕೋಟಿ ಅನುದಾನದಲ್ಲಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಪ್ರವೇಶದ ಬಳಿ ನಿರ್ಮಾಣವಾಗಿರುವ ಭಾನುವಾರ ಸಂತೆ ಕಟ್ಟಡ ಉಪಯೋಗವಾಗುತ್ತಿಲ್ಲ.
2018ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಳ್ನಾವರ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ನಗರ ಸೇರಿದಂತೆ 3 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಯಿತು. ಐದು ವರ್ಷ ಕಳೆದರೂ ಕಚೇರಿ ಸ್ಥಾಪಿಸಲು ಮತ್ತು ಮೂಲ
ಸೌಕರ್ಯ ಒದಗಿಸಲು ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಿಲ್ಲ ಎಂಬ ಬೇಸರ ಜನರಲ್ಲಿದೆ.
ಧಾರವಾಡದಿಂದ ಬೆಳಗಾವಿ ಕಿತ್ತೂರು ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ 2021–22ರಲ್ಲಿ ರಾಜ್ಯ ಸರ್ಕಾರವು ₹ 463 ಕೋಟಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಈ ಯೋಜನೆ ಇನ್ನೂ ಸಮೀಕ್ಷೆಯ ಹಂತದಲ್ಲಿದ್ದು, ಆಮೆಗತಿಯಲ್ಲಿ ಸಾಗುತ್ತಿದೆ. ಜವಳಿ ಪಾರ್ಕ್ ಸ್ಥಾಪಿಸಲು ನವಲಗುಂದ ಬಳಿಯ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 15 ಎಕರೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದೆ. ಭೂಮಿ ಹಸ್ತಾಂತರವಾಗಿದ್ದಕ್ಕೆ ಸಮಾರಂಭ ಮಾಡಿ ಕೈತೊಳೆದುಕೊಂಡರು. ನವಲಗುಂದದಲ್ಲಿ ಜಮಖಾನಾ ಮೈಕ್ರೊಕ್ಲಸ್ಟರ್ ಕೇಂದ್ರ ಅಭಿವೃದ್ಧಿ ಸ್ಥಾಪಿಸುವುದು ಘೋಷಣೆಗಷ್ಟೇ ಸೀಮಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.