ADVERTISEMENT

Karnataka Bandh: ಹುಬ್ಬಳ್ಳಿಗೆ ತಟ್ಟದ ಬಂದ್‌ ಬಿಸಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 7:31 IST
Last Updated 22 ಮಾರ್ಚ್ 2025, 7:31 IST
   

ಹುಬ್ಬಳ್ಳಿ: ಮಹಾರಾಷ್ಟ್ರಿಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲಾಗುತ್ತಿರುವ ದಬ್ಬಾಳಿಕೆ ಖಂಡಿಸಿ ವಾಟಾಳ್ ನಾಗರಾಜ್ ನೀಡಿದ್ದ ಕರ್ನಾಟಕ ಬಂದ್ ಕರೆಗೆ ವಾಣಿಜ್ಯನಗರಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆಯಿಂದಲೂ ಆಟೊ, ವಾಹನಗಳ ಸಂಚಾರ ಹಾಗೂ ವ್ಯಾಪಾರ ವಹಿವಾಟುಗಳು ನಿರಾತಂಕವಾಗಿ ಸಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಹ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ‌ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕರುನಾಡ ವಿಜಯ ಸೇನೆ ನೇತೃತ್ವದಲ್ಲಿ ಕೆಲವು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಚನ್ನಮ್ಮ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಮಹರಾಷ್ಟ್ರದ ವಿರುದ್ಧ ಘೋಷಣೆ ಕೂಗಿದರು. ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಮಿನಿ ವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ADVERTISEMENT

ಸಂಜೀವ ದುಮ್ಮಕನಾಳ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಚನ್ನಬಸಪ್ಪ ಯಲಿಗಾರ, ಹಸನಸಾಬ್ ಬಡೇಖಾನ್, ದುರ್ಗಪ್ಪ ಜಂಗಲಿ, ಸೈಫುದ್ದೀನ್, ಹನುಮಂತಪ್ಪ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ರಾಜು ಕಾಲವಾಡ, ಸದಾನಂದ ಪವಾಡಿ ಇನ್ನಿತರರು ಇದ್ದರು.

ಬಂದ್ ಇಲ್ಲ, ಬಂದ್ ಇಲ್ಲ:

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಆಟೊ ಚಾಲಕ ಮಾಲಕರ ಸಂಘದ ಸದಸ್ಯರು ನಿಲಿಜಿನ್ ರಸ್ತೆಯಿಂದ 'ಬಂದ್ ಇಲ್ಲ ಬಂದ್ ಇಲ್ಲ' ಎಂದು ಘೋಷಣೆ ಕೂಗುತ್ತ ಕೈಯ್ಯಲ್ಲಿ ಗುಲಾಬಿ ಹೂವು ಹಿಡಿದುಕೊಂಡು ಚನ್ನಮ್ಮ ವೃತ್ತಕ್ಕೆ ಬಂದರು. ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ, ಅಂಗಡಿಕಾರರಿಗೆ ಗುಲಾಬಿ ಹೂ ನೀಡಿ, ಬಂದ್‌ಗೆ ಬೆಂಬಲಿಸದಂತೆ ವಿನಂತಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆಟೊ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, 'ಉತ್ತರ ಕರ್ನಾಟಕ ಭಾಗದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಕೂತು ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಮಕ್ಕಳ ಪರೀಕ್ಷಾ ಸಮಯದಲ್ಲಿ ಬಂದ್ ಮಾಡಿದರೆ ಅವರ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ. ಇದ್ಯಾವ ಸೂಕ್ಷ್ಮವೂ ಅರಿಯದೆ ಬಂದ್ ಕರೆ ನೀಡಿದ್ದು ಸರಿಯಲ್ಲ. ಇದೊಂದು ಬೋಗಸ್ ಬಂದ್ ಆಗಿದೆ. ಹೀಗಾಗಿ ವಾಣಿಜ್ಯನಗರಿ ಜನತೆ ಬಂದ್‌ಗೆ ಬೆಂಬಲಿಸದಂತೆ ಗುಲಾಬಿ ನೀಡಿ ವಿನಂತಿಸುತ್ತಿದ್ದೇವೆ' ಎಂದರು.

ರಾಜೇಶ ಬಿಜವಾಡ, ಮುರಳ ಇಂಗಳಹಳ್ಳಿ, ದಾವಲಸಾಬ್ ಕುರುಹಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ಹನುಮಂತ ಬೀಪಾಲಿ, ಶುಕ್ರು ದೇಸಾಯಿ, ಮಹಾವೀರ ಬಿಲಾನ್, ಫಾರೂಕ್ ಕಿತ್ತೂರು ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.