ಹುಬ್ಬಳ್ಳಿ: ಧಾರವಾಡದಲ್ಲಿ ಅಷ್ಟೇ ಅಲ್ಲ, ರಾಜ್ಯದ ಅಥವಾ ದೇಶದ ಯಾವುದೇ ಮೂಲೆಗೆ ಹೋಗಿ ಧಾರವಾಡ ಮೂಲದ ವಿದ್ಯಾರ್ಥಿಗೆ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಬಗ್ಗೆ ಮಾಹಿತಿ ಕೇಳಿದರೆ, ಬಹುತೇಕರಿಂದ ವ್ಯಕ್ತವಾಗುವ ಉತ್ತರ: ಕೆಸಿಡಿ. ಕರ್ನಾಟಕ ಕಾಲೇಜು, ಧಾರವಾಡ.
ಬ್ರಿಟಿಷರ ಕಾಲದ ಈ ಕಟ್ಟಡವು ಸದ್ಯ ಕಾಲೇಜು. ಆದರೆ, ಆರಂಭದ ದಿನಗಳಲ್ಲಿ ಇದು ಅಕ್ಷರಶಃ ರೈಲ್ವೆ ಇಲಾಖೆಯ ಕಚೇರಿಯಾಗಿತ್ತು. 1882ರಲ್ಲಿ ಸದರ್ನ್ ಮರಾಠಾ ಕಂಪನಿಯವರು ಮೀಟರ್‌ಗೇಜ್ ರೈಲ್ವೆ ಮಾರ್ಗಗಳ ಕಾಮಗಾರಿ ಆರಂಭಿಸಿದಾಗ, ಇದೇ ಕಟ್ಟಡವನ್ನು ಮುಖ್ಯ ಆಡಳಿತ ಕಚೇರಿ ಆಗಿಸಿಕೊಂಡರು. 1908ರಲ್ಲಿ ಕಾಮಗಾರಿಯು ಹುಬ್ಬಳ್ಳಿಗೆ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡ ಬಳಕೆಯಾಗದೇ, ಪಾಳು ಬಿತ್ತು.
1909ರಿಂದಲೇ ರಾವ್ ಬಹದ್ದೂರ್ ರೊದ್ಧರು, ಬೆಳವಡಿ ನಂಜುಂಡಯ್ಯನವರು ಕಟ್ಟಡದಲ್ಲಿ ಕಾಲೇಜು ಆರಂಭಿಸಲು ಯೋಚಿಸಿದರು. ನಕ್ಷೆಯನ್ನೂ ಸಿದ್ಧಪಡಿಸಿದರು. ಆದರೆ, ಫಲಪ್ರದವಾಗಲಿಲ್ಲ. ಸರಿಯಾಗಿ 8 ವರ್ಷದ ಬಳಿಕ 1917ರ ಜೂನ್ 20ರಂದು ಧಾರವಾಡದ ಗಂಡು ಮಕ್ಕಳ ಟ್ರೈನಿಂಗ್ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಕಾಲೇಜು ಆರಂಭಗೊಂಡಿತು. ಇದಕ್ಕೆ ಆಗಿನ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಅನುಮೋದಿಸಿತು.
ಈಗಿನ ಪಾವಟೆ ನಗರ ಆಗ ಚೋಟಾ ಮಹಾಬಲೇಶ್ವರ ಪ್ರದೇಶವಾಗಿತ್ತು. ರೈಲು ನಿಲ್ದಾಣದಿಂದ ಒಂದೂವರೆ ಮೈಲು ದೂರದಲ್ಲಿ, 73 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬ್ರಿಟೀಷ್ ಸರ್ಕಾರದಿಂದ ₹ 1 ಲಕ್ಷವನ್ನು ಮುಂಗಡಪತ್ರದಲ್ಲಿ ನೀಡಿತು. ಗವರ್ನರ್ ಜಾರ್ಜ್ ಲಾಯ್‌ಡರೋ, ಪ್ರಿನ್ಸಿಪಾಲ್ ರ‍್ಯಾಲಿನ್‌ಸನ್ 1919ರಲ್ಲಿ ಜುಲೈ 29ರಂದು ಕಟ್ಟಡಕ್ಕೆ ಅಡಿಗಲ್ಲು ಹಾಕಿದರು.
ಅಲ್ಲಿಯೇ ಕಂಡ ಕೆಂಪು ಕಟ್ಟಡದಲ್ಲೇ ಕಾಲೇಜು ಆರಂಭಿಸಬಹುದು ಎಂಬ ಸಲಹೆ ವ್ಯಕ್ತವಾಯಿತು. ಇದಕ್ಕೆ ಪೂರಕವಾಗಿ ಬೆಳವಣಿಗೆಗಳು ನಡೆದವು. ಕಟ್ಟಡದ ನವೀಕರಣ ಪ್ರಕ್ರಿಯೆ 4 ತಿಂಗಳಲ್ಲಿ ಪೂರ್ಣಗೊಂಡಿತು. ಇದಕ್ಕೆ ಮೂಲ ನಕ್ಷೆಯನ್ನು ಬೆಳವಡಿ ನಂಜುಂಡಯ್ಯನವರು ಸಿದ್ಧಪಡಿಸಿದರು.
1920 ಜುಲೈ 15ರಂದು ನೂತನ ಕಟ್ಟಡ ಉದ್ಘಾಟನೆಯಾಯಿತು. ಆ ದಿನದಂದೇ ಪ್ರಥಮ ದರ್ಜೆ ಕಾಲೇಜು ಎಂದು ಘೋಷಿಸಲ್ಪಟ್ಟಿತು.1924ರಲ್ಲಿ ಇಂಟರ್ ಸೈನ್ಸ್ ತರಗತಿಗಳು ಆರಂಭವಾದವು. 1925 ಜೂನ್ 29ರಂದು ದಾವಾನ್ ಬಹದ್ದೂರ್ ರೊದ್ಧರು, ಹರಟಾಳ್ ರುದ್ರಗೌಡ, ಪ್ರಿನ್ಸ್‌ಪಾಲ್ ರ‍್ಯಾನಿನ್‌ಸನ್ ಅವರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿರುವ ಮತ್ತು ಆತ್ಮವಿಶ್ವಾಸದ ಹೆಜ್ಜೆಯಲ್ಲಿ ಮುನ್ನಡೆಸಿರುವ ಕೆಸಿಡಿಗೆ ಈಗ ಶತಮಾನದ ಸಂಭ್ರಮ.
ಕರ್ನಾಟಕ ಕಾಲೇಜು ಆರಂಭಕ್ಕೆ ಸಹಕಾರ ನೀಡಿದವರು ಎಂದಿಗೂ ಸ್ಮರಣೀಯ. ಗಂಡು ಮಕ್ಕಳ ಟ್ರೈನಿಂಗ್ ಶಾಲೆಯಲ್ಲಿ ನಡೆದ ಆರಂಭೋತ್ಸವದಲ್ಲಿ 4 ಸಾವಿರ ಜನ ಸೇರಿದ್ದರು. ಇದು ಇಂದಿಗೂ ಧಾರವಾಡದ ಜನ ಶಿಕ್ಷಣಕ್ಕೆ ಕೊಡುವ ಬೆಲೆ ತೋರಿಸುತ್ತದೆ.ಹರ್ಷ ಡಂಬಳ ರಾಜ್ಯಶಾಸ್ತ್ರ ನಿವೃತ್ತ ಉಪನ್ಯಾಸಕರು ಕೆ.ಇ ಬೋರ್ಡ್ ಕಾಲೇಜು ಧಾರವಾಡ
(ಪೂರಕ ಮಾಹಿತಿ: ಕರ್ನಾಟಕ ರಾಜ್ಯ ಗ್ಯಾಜೆಟಿಯರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.