ADVERTISEMENT

ಬಾಕಿ ಪಾವತಿಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘದಿಂದ ಮಾ.6ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:53 IST
Last Updated 20 ಫೆಬ್ರುವರಿ 2026, 6:53 IST
ಆರ್‌.ಮಂಜುನಾಥ್‌
ಆರ್‌.ಮಂಜುನಾಥ್‌   

ಹುಬ್ಬಳ್ಳಿ: ‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ₹37 ಸಾವಿರ ಕೋಟಿ ಬಾಕಿ ಬರಬೇಕಿದೆ. ಬಾಕಿ ಬಿಡುಗಡೆ ಮಾಡಲ ಆಗ್ರಹಿಸಿ ಮಾರ್ಚ್‌ 6ರಂದು ಬೆಂಗಳೂರಿನಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್‌ ಹೇಳಿದರು.

ಪ್ರತಿಭಟನೆಯ ಪೂರ್ವಭಾವಿಯಾಗಿ ನಗರದಲ್ಲಿ ಗುರುವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯ ಬಳಿಕವೂ ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ ಏಪ್ರಿಲ್‌ ತಿಂಗಳ ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು‘ ಎಂದು ಎಚ್ಚರಿಸಿದರು.

‘ಮೂರು ವರ್ಷಗಳಿಂದ ಕಾಮಗಾರಿಗಳ ಬಿಲ್ ಪಾವತಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೆಲವು ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಬಾಕಿ ಪಾವತಿಸದ ಕಾರಣ  ಸಂಕಷ್ಟಕ್ಕೀಡಾಗಿದ್ದಾರೆ’ ಎಂದರು.

ADVERTISEMENT

ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಭಾಗವಹಿಸುವ ನಿರೀಕ್ಷೆ ಇದೆ. ಜಲ ಸಂಪನ್ಮೂಲ ಇಲಾಖೆಯಿಂದ ₹13 ಸಾವಿರ ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹8,370 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ₹3,800 ಕೋಟಿ, ಸಣ್ಣ ನೀರಾವರಿ ಇಲಾಖೆ ₹3 ಸಾವಿರ ಕೋಟಿ, ನಗರಾಭಿವೃದ್ಧಿ ಇಲಾಖೆ ₹2 ಸಾವಿರ ಕೋಟಿ ಬಾಕಿ ಬರಬೇಕಿದೆ ಎಂದು ತಿಳಿಸಿದರು.

ಪ್ಯಾಕೇಜ್ ಟೆಂಡರ್‌ ಪದ್ಧತಿ ರದ್ದು ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗ ಹೆಚ್ಚಿನ ಪ್ಯಾಕೇಜ್ ಟೆಂಡರ್‌ ವ್ಯವಸ್ಥೆ ಇದೆ. ಹೆಚ್ಚು ಮೊತ್ತದ ಕಾಮಗಾರಿಗಳ ಪ್ಯಾಕೇಜ್ ಬೇರೆ ರಾಜ್ಯದ ಗುತ್ತಿಗೆದಾರರ ಪಾಲಾಗುತ್ತಿವೆ ಎಂದರು.

ಹಣ ಬಿಡುಗಡೆ ಮಾಡಲು ಈ ಸರ್ಕಾರದಲ್ಲಿಯೂ ಹೆಚ್ಚಿನ ಕಮಿಷನ್ ನೀಡಬೇಕಿದೆ.  ಮುಖ್ಯಮಂತ್ರಿ ಅವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಿದರು.

ಕಮಿಷನ್ ಕೊಡದೆ ಭೂಮಿಪೂಜೆ ನಡೆಯಲ್ಲ: ‘ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಯಾದೇಶ ನೀಡಿದರೂ, ಸ್ಥಳೀಯ ಶಾಸಕ, ಸಂಬಂಧಪಟ್ಟ ಇಲಾಖೆ ಸಚಿವರಿಗೆ ಕಮಿಷನ್ ನೀಡುವವರೆಗೆ ಅವರು ಭೂಮಿಪೂಜೆಗೆ ಬರುವುದಿಲ್ಲ. ಹೀಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಮುಗಿಯುವುದಿಲ್ಲ’ ಎಂದರು.

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಗುರುಸಿದ್ದಪ್ಪ ಬಿ.ಎಸ್., ಎಂ.ಕೆ.ಮುಲ್ಲಾ, ಕಾರ್ಯಾಧ್ಯಕ್ಷರಾದ ಸುರೇಶ ಭೂಮರಡ್ಡಿ, ಬಿ.ಸಿ.ದಿನೇಶ, ಧಾರವಾಡ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎಸ್. ಸಂಕಾಗೌಡಶಾನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ನಾವು ಬೆದರಿಕೆ ಅಥವಾ ಬ್ಲಾಕ್‌ಮೇಲ್ ಮಾಡುತ್ತಿಲ್ಲ. ರಾಜ್ಯದ 1.50 ಲಕ್ಷ ಗುತ್ತಿಗೆದಾರರ ಹಿತ ಕಾಯುವುದೇ ನಮ್ಮ ಉದ್ದೇಶ. ಮಾಡಿದ ಕೆಲಸಕ್ಕೆ ಕೂಲಿ ಕೇಳುವುದು ತಪ್ಪಲ್ಲ 
ಆರ್. ಮಂಜುನಾಥ ಅಧ್ಯಕ್ಷ ರಾಜ್ಯ ಗುತ್ತಿಗೆದಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.