ADVERTISEMENT

ಬಿಜೆಪಿಯಲ್ಲಿ ಒಬ್ಬ ವ್ಯಕ್ತಿ ನಿರ್ಣಾಯಕವಲ್ಲ: ಜಗದೀಶ ಶೆಟ್ಟರ್ ವಿರುದ್ಧ ಮಹೇಶ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 9:31 IST
Last Updated 18 ಏಪ್ರಿಲ್ 2023, 9:31 IST
ಜಗದೀಶ ಶೆಟ್ಟರ್ ಮತ್ತು ಮಹೇಶ ಟೆಂಗಿನಕಾಯಿ
ಜಗದೀಶ ಶೆಟ್ಟರ್ ಮತ್ತು ಮಹೇಶ ಟೆಂಗಿನಕಾಯಿ   

ಹುಬ್ಬಳ್ಳಿ: ‘ಬಿಜೆಪಿಯಲ್ಲಿ ಯಾರು ಯಾರಿಗೂ ಟಿಕೆಟ್‌ ಕೊಡಿಸಲು ಸಾಧ್ಯವಿಲ್ಲ. ಅದಕ್ಕೆ ಹಲವು ಪ್ರಕ್ರಿಯೆಗಳು ಇವೆ. ಪಕ್ಷದಲ್ಲಿ ಒಬ್ಬ ವ್ಯಕ್ತಿ ನಿರ್ಣಾಯಕ ಅಲ್ಲ' ಎಂದು ಹು–ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು.

ಬಿ.ಎಲ್‌.ಸಂತೋಷ್‌ ಅವರು ತಮ್ಮ ಮಾನಸಪುತ್ರ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಜಗದೀಶ ಶೆಟ್ಟರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸದ ಅವರು, ‘ಇದು ಅವರ ವೈಯಕ್ತಿಕ ಅಭಿಪ್ರಾಯ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೋರ್ ಕಮಿಟಿ ಮತ್ತು ಶಕ್ತಿ ಕೇಂದ್ರಗಳ ಪ್ರಮುಖರ ಅಭಿಪ್ರಾಯ ಆಧರಿಸಿ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ನನಗೆ ಟಿಕೆಟ್ ನೀಡಿದೆ. ಒಂದು ವೇಳೆ ಶೆಟ್ಟರ್‌ ಅವರಿಗೆ ಟಿಕೆಟ್ ನೀಡಿದ್ದರೆ ಅವರ ಪರವಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದೆ’ ಎಂದು ತಿಳಿಸಿದರು.

‘ಕಳೆದ ಚುನಾವಣೆಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೆ. ಈ ಕಾರಣಕ್ಕೆ ನನಗೆ ಟಿಕೆಟ್ ನೀಡಲಾಗಿತ್ತು. ಕೊನೆ ಕ್ಷಣದಲ್ಲಿ ಪಕ್ಷದ ನಿರ್ದೇಶನ ಪಾಲಿಸಿದೆ. ಈಗಲೂ ಪಕ್ಷದ ನಿರ್ಧಾರದಂತೆ ಸ್ಪರ್ಧಿಸಿದ್ದೇನೆ’ ಎಂದರು.

ADVERTISEMENT

‘ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತವಿದೆ. ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡುವುದಿಲ್ಲ. ಕೊನೆಯ ಗಳಿಗೆವರೆಗೂ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಎಲ್ಲ ಮುಖಂಡರು ಪ್ರಯತ್ನಿಸಿದರು. ಆದರೂ ಅವರು ಆ ನಿರ್ಧಾರ ತೆಗೆದುಕೊಂಡರು’ ಎಂದು ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಮಹೇಶ ಟೆಂಗಿನಕಾಯಿ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.