ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಹಲವೆಡೆ ಮನೆಗಳು ಕುಸಿದಿವೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಗೋಡೆ ಕುಸಿದು ಬಾಲಕ ದರ್ಶನ ನಾಗಪ್ಪ ಲಾತೂರ (12) ಮೃತಪಟ್ಟಿದ್ದು, ಶ್ರೀಶೈಲ (8) ಎಂಬವನಿಗೆ ಪೆಟ್ಟಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆಲಮೇಲ ತಾಲ್ಲೂಕಿನ ಶಂಬೇವಾಡದಲ್ಲಿ ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರು, ಮಕ್ಕಳು ಸೇರಿ ಹತ್ತಕ್ಕೂ ಹೆಚ್ಚು ಜನರನ್ನು ಅಗ್ನಿ ಶಾಮಕ ಸಿಬ್ಬಂದಿ ಬೋಟ್ ಮೂಲಕ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.
654 ಜನರಿಗೆ ಆಶ್ರಯ: ನದಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಇಂಡಿ ಮತ್ತು ಆಲಮೇಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 140 ಕುಟುಂಬಗಳ 152 ಮಕ್ಕಳು ಸೇರಿ ಒಟ್ಟು 654 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.
47 ಮನೆಗಳಿಗೆ ಹಾನಿ: ಬಸವನಬಾಗೇವಾಡಿ, ಬಬಲೇಶ್ವರ, ನಿಡಗುಂದಿ, ತಿಕೋಟಾ, ತಾಳಿಕೋಟೆ, ವಿಜಯಪುರ, ಚಡಚಣ, ಸಿಂದಗಿ ಮುದ್ದೇಬಿಹಾಳ, ಕೊಲ್ಹಾರ, ದೇವರ ಹಿಪ್ಪರಗಿ ಸೇರಿ ವಿವಿಧೆಡೆ 47ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಇಂಡಿಯಲ್ಲಿ ಶಾಂತು ಧನಶೆಟ್ಟಿ ಅವರಿಗೆ ಸೇರಿದ ಗೋದಾಮಿನಲ್ಲಿದ್ದ ₹1 ಕೋಟಿ ಮೊತ್ತದ ರಸಾಯನಿಕ ಗೊಬ್ಬರ ಮತ್ತು ಔಷಧ ಹಾನಿಯಾಗಿದೆ.
ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಸೀನಾ, ಭೀಮಾ ಬೋರಿ, ಕೊಳೆಗಾಂವ್ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ 431 ಶಾಲೆಗಳು ಜಲಾವೃತಗೊಂಡಿವೆ.
ಬಳ್ಳಾರಿ ಜಿಲ್ಲೆಯಲ್ಲಿ 38 ಮನೆಗಳಿಗೆ ಹಾನಿಯಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ 36 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಳ್ಳಾರಿ, ಕಂಪ್ಲಿ ತಾಲ್ಲೂಕುಗಳಲ್ಲಿ ತಲಾ ಒಂದೊಂದು ಮನೆಗೆ ಹಾನಿಯಾಗಿದೆ.
ಬೆಳಗಾವಿ ನಗರ ಮತ್ತು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಕೃಷ್ಣಾ, ಮಲಪ್ರಭಾ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ನೀರಿನ ಹರಿವು ಏರಿಕೆಯಾಗಿದೆ.
ಸವದತ್ತಿ ತಾಲ್ಲೂಕಿನ ಹಿಟ್ಟಣಗಿ ಗ್ರಾಮದ ಏಳು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಚುಳಕಿ, ಬೆಟಸೂರು ಗ್ರಾಮಗಳಲ್ಲಿ ನಾಲ್ಕು ಮನೆಗಳು ಧರೆಗುರುಳಿವೆ.
ಚಿಕ್ಕೋಡಿ ಹಾಗೂ ಯರಗಟ್ಟಿ ತಾಲ್ಲೂಕಿನಲ್ಲೂ ನಿರಂತರ ಮಳೆಯ ಕಾರಣ ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಳು ನೀರಿನಲ್ಲಿ ನಿಂತಿವೆ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಶನಿವಾರ 20,764 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮೂಡಲಗಿ ಸುತ್ತಮುತ್ತಲಿನಲ್ಲಿ ಅತಿವೃಷ್ಟಿಯ ಕಾರಣ ಈರುಳ್ಳಿ, ಸೋಯಾಬಿನ್ ಮತ್ತು ಗೋವಿನಜೋಳ ಸೇರಿ 300 ಎಕರೆಗೂ ಹೆಚ್ಚು ಬೆಳೆ ನಷ್ಟವಾಗಿದೆ. ಗೋಕಾಕ ಹೊರವಲಯದಲ್ಲಿ ಬರುವ ಸಂಕೇಶ್ವರ– ನರಗುಂದ ರಾಜ್ಯ ಹೆದ್ದಾರಿ ಮೇಲೆ ನೀರು ಹರಿದು ನಾಲ್ಕು ತಾಸಿಗೂ ಹೆಚ್ಚು ಸಮಯ ಸಂಚಾರ ವ್ಯತ್ಯಯ ಉಂಟಾಯಿತು.
ಮಡಿಕೇರಿಯಲ್ಲಿ ಮಳೆ
ಮಡಿಕೇರಿ: ನಗರದಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು. ಇದರಿಂದ ಯುವದಸರೆ ಪ್ರಯುಕ್ತ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಅಡ್ಡಿಯಾಯಿತು. ದಿನವಿಡೀ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಹನಿಯುತ್ತಿತ್ತು. ದಸರಾ ದಶಮಂಪಟಗಳ ತಯಾರಿಗೂ ಇದರಿಂದ ಸಮಸ್ಯೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.