ADVERTISEMENT

ಒಂದು ಕ್ಷೇತ್ರ ಗೆದ್ದಿದ್ದಕ್ಕೆ ಕಾಂಗ್ರೆಸ್‌ಗೆ ಅಹಂಕಾರ: ಶ್ರೀರಾಮುಲು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 10:28 IST
Last Updated 19 ನವೆಂಬರ್ 2021, 10:28 IST
 ಶ್ರೀರಾಮುಲು
ಶ್ರೀರಾಮುಲು   

ಹುಬ್ಬಳ್ಳಿ: ರಾಜ್ಯದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದಕ್ಕೆ ಕಾಂಗ್ರೆಸ್‌ ಅಹಂಕಾರದಿಂದ ಬೀಗುತ್ತಿದೆ. ಅವರಿಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ತಕ್ಕ ತಿರುಗೇಟು ನೀಡುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಇಲ್ಲಿನ ಶ್ರೀನಿವಾಸ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್‌ನ ನಾಯಕರು ಚುನಾವಣೆಗಳಿಗೆ ಮತ್ತು ಹೇಳಿಕೆಗಳನ್ನು ನೀಡಲು ಮಾತ್ರ ಸೀಮಿತರು. ಅವರ ಪಕ್ಷದ ನಾಯಕ ರಾಹುಲ್‌ ಗಾಂಧಿ ಪಾರ್ಟ್‌ ಟೈಮ್‌ ರಾಜಕಾರಣಿಯಾಗಿದ್ದು, ಚುನಾವಣೆಯ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ’ ಎಂದು ಟೀಕಿಸಿದರು.

‘ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 15ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಸಾಮರ್ಥ್ಯವಿದ್ದರೆ ಕಾಂಗ್ರೆಸ್‌ ನಮಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿ’ ಎಂದು ಸವಾಲು ಹಾಕಿದ ಅವರು ‘ಪರಿಶಿಷ್ಟರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುವುದಿಲ್ಲ. ನಮ್ಮ ಪಕ್ಷ ಪರಿಶಿಷ್ಟರಿಗೆ ಅತ್ಯುನ್ನತ ಸ್ಥಾನಮಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ವರ್ಗಗಳ ಜನಪ್ರತಿನಿಧಿಗಳಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿಗಳ ಎಲ್ಲ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು. ಕಾರ್ಯಕರ್ತರ ಅಪಾರ ಶ್ರಮದಿಂದಲೇ ಪಕ್ಷ ದೊಡ್ಡದಾಗಿ ಬೆಳೆದಿದೆ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟರಿಗೆ ಅನೇಕ ಸವಲತ್ತುಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಹಿಂದೆ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿತ್ತು. ಅವರು ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.