
ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ಸಕಲ ಶೈಕ್ಷಣಿಕ ಸೌಲಭ್ಯ ಒದಗಿಸಬೇಕು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಧಾರವಾಡ ಜಿಲ್ಲೆಯಲ್ಲಿ 18 ಒಳಗೊಂಡಂತೆ ರಾಜ್ಯದಾದ್ಯಂತ 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಆರಂಭಿಸಲು ಸಿದ್ಧತೆ ನಡೆಸಿದೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಉದ್ದೇಶಿಸಿರುವ ಶಾಲಾ ಶಿಕ್ಷಣ ಇಲಾಖೆ, ರಾಜ್ಯದಲ್ಲಿ 800 ಶಾಲೆಗಳನ್ನು ‘ಮ್ಯಾಗ್ನೆಟ್ ಶಾಲೆಗಳು’ ಎಂದು ಗುರುತಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ 18 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಅನುಮೋದನೆ ಸಿಕ್ಕಿದೆ. ನವಲಗುಂದ ತಾಲ್ಲೂಕಿನಲ್ಲಿ ಮೂರು, ಧಾರವಾಡ– ಐದು, ಹುಬ್ಬಳ್ಳಿ– ಏಳು, ಕುಂದಗೋಳ– ಒಂದು, ಕಲಘಟಗಿಯಲ್ಲಿ ಎರಡು ಶಾಲೆಗಳನ್ನು ಕೆಪಿಎಸ್ ಆಗಿ ಮಾರ್ಪಡಿಸಲು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೂ ಶಿಕ್ಷಣದ ವ್ಯವಸ್ಥೆ ಇರಲಿದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ (ಕನ್ನಡ– ಇಂಗ್ಲಿಷ್) ಬೋಧನೆ ಇರಲಿದೆ. 6ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು, ಕ್ರಿಯಾಶೀಲ ಕಲಿಕಾ ಪದ್ಧತಿ ಅಳವಡಿಸಲಾಗಿದೆ. 10ರಿಂದ 12ನೇ ತರಗತಿಯವರೆಗೆ ನಿರ್ಗಮನ ಆಯ್ಕೆಗಳನ್ನು ಒದಗಿಸಲಾಗುತ್ತದೆ. ಒಂದನೇ ತರಗತಿಯಲ್ಲಿ ಕಂಪ್ಯೂಟರ್ ಶಿಕ್ಷಣ ಹಾಗೂ ಆರನೇ ತರಗತಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ.
‘ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಅನೇಕ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಪಿ.ಯು.ಸಿ. ಕಲಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯ ಕಾರಣವೊಡ್ಡಿ ಖಾಸಗಿ ಶಾಲಾ–ಕಾಲೇಜುಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಒಂದೇ ಕ್ಯಾಂಪಸ್‌ನಲ್ಲಿ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಶಿಕ್ಷಣ ಒದಗಿಸಬೇಕು ಎಂಬ ಉದ್ದೇಶವಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದರು.
‘ಜಿಲ್ಲೆಯಲ್ಲಿ 1,014 ಪ್ರಾಥಮಿಕ ಹಾಗೂ 512 ಪ್ರೌಢಶಾಲೆಗಳಿದ್ದು, 1ರಿಂದ 10ನೇ ತರಗತಿವರೆಗೆ ಒಟ್ಟು 3,40,487 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇವುಗಳಲ್ಲಿ 735 ಸರ್ಕಾರಿ ಪ್ರಾಥಮಿಕ ಹಾಗೂ 112 ಸರ್ಕಾರಿ ಪ್ರೌಢಶಾಲೆಗಳು ಇವೆ. ಆದರೆ, ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮುಂದಿನ ವರ್ಷ ಮತ್ತಷ್ಟು ಕೆಪಿಎಸ್ ಶಾಲೆಗಳನ್ನು ಆರಂಭಿಸಿ, ಖಾಸಗಿ ಶಾಲೆಗಳಿಗಿಂತಲೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.
‘1,200 ವಿದ್ಯಾರ್ಥಿಗಳ ದಾಖಲಾತಿ ಗಮನದಲ್ಲಿ ಇಟ್ಟುಕೊಂಡು ಒಂದು ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಲಾಗುವುದು. ಕಲಿಕೆಗೆ ಪೂರಕ ವಾತಾವರಣ, ಜಾಗದ ವ್ಯವಸ್ಥೆ ಇರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮಾರ್ಪಡಿಸಲಾಗುವುದು’ ಎಂದು ಹೇಳಿದರು.
ಸದ್ಯ ಜಿಲ್ಲೆಯಲ್ಲಿ ಒಂಬತ್ತು ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಕರಡಿಗುಡ್ಡ, ಶೆಲವಾಡಿ, ಗುಡಿಗೇರಿ, ಹುಬ್ಬಳ್ಳಿ ನವನಗರ, ಗೋಪನಕೊಪ್ಪ, ಬಿಡನಾಳ, ರಾಯನಾಳ, ಬೊಮ್ಮಿಗಟ್ಟಿ ಹಾಗೂ ಚಿಲಕಚಾಡ ಗ್ರಾಮಗಳಲ್ಲಿನ ಸರ್ಜಾರು ಕೆಪಿಎಸ್ ಖಾಸಗಿ ಶಾಲೆಗಳಿಗೂ ಮೀರಿದ ಶೈಕ್ಷಣಿಕ ಸೌಲಭ್ಯಗಳು ಇಲ್ಲಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವೂ ಹೆಚ್ಚಿದೆ.
‘ಕರ್ನಾಟಕ ಪಬ್ಲಿಕ್ ಶಾಲೆಗಳು ಉತ್ತಮ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒಳಗೊಂಡಿರಲಿವೆ. ಪ್ರತಿ ಕೆಪಿಎಸ್‌ನಲ್ಲಿ 1,200 ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸಮರ್ಪಕ ಮೂಲಸೌಕರ್ಯ ಒದಗಿಸಲಾಗುತ್ತದೆ. ಪ್ರತಿ ಶಾಲೆಗೂ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ರಾಜ್ಯ ಸರ್ಕಾರದಿಂದ ₹2 ಕೋಟಿಯಿಂದ ₹4 ಕೋಟಿವರೆಗೆ ಅನುದಾನ ಸಿಗಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ಯೋಜನಾ ಸಂಯೋಜಕ ಎಸ್.ಎಂ. ಹುಡೇದಮನಿ ತಿಳಿಸಿದರು.
‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದರಿಂದ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂಬ ಗೊಂದಲ ಜನರಲ್ಲಿದೆ. ಆದರೆ, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ’ ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ‘ಗ್ರಾಮೀಣ ಭಾಗದಿಂದ ಕರ್ನಾಟಕ ಪಬ್ಲಿಕ್ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಹಾಗೂ ಶಾಲಾ ಅವಧಿ ಬಳಿಕ ಮರಳಿ ಬಿಡಲು ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆ ಹೊಂದಿದೆ. ಇದರಿಂದ ಪ್ರತಿಯೊಂದು ಮಗು ಒಂದೇ ಸೂರಿನಡಿ ಬಾಲ್ಯದಿಂದ 12ನೇ ತರಗತಿವರೆಗೂ ಶಿಕ್ಷಣ ಪಡೆಯಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ ಮತ್ತಷ್ಟು ಕೆಪಿಎಸ್ ಆರಂಭ ಖುಷಿಯ ಸಂಗತಿ. ಆದರೆ, ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಕೆಪಿಎಸ್‌ಗೆ ವಿಲೀನ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಮುಚ್ಚಬಾರದು.–ಶಿವಾನಂದ ಬಾಳನಗೌಡರ, ಧಾರವಾಡ
ಈ ಮುಂಚೆ ನಮ್ಮ ಶಾಲೆಯಲ್ಲಿ ಸರಿಯಾದ ಸೌಲಭ್ಯಗಳಿರಲಿಲ್ಲ. ಕೆಪಿಎಸ್ ಮಾಡಿದ ಬಳಿಕ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ದಿನವೂ ಶಾಲೆಗೆ ಹೋಗಲು ಹುಮ್ಮಸ್ಸು ಬರುತ್ತದೆ.–ಪ್ರವೀಣ, ವಿದ್ಯಾರ್ಥಿ, ಸರ್ಕಾರಿ ಪಬ್ಲಿಕ್ ಪ್ರೌಢಶಾಲೆ ಕರಡಿಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.