ADVERTISEMENT

ಧಾರವಾಡ: ರಾಜ್ಯೋತ್ಸವ ಪುರಸ್ಕಾರಕ್ಕೆ ಪ್ರೊ.ರವೀಂದ್ರ ಕೋರಿಶೆಟ್ಟರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:33 IST
Last Updated 31 ಅಕ್ಟೋಬರ್ 2025, 6:33 IST
ರವೀಂದ್ರ ಕೋರಿಶೆಟ್ಟರ
ರವೀಂದ್ರ ಕೋರಿಶೆಟ್ಟರ   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ರವೀಂದ್ರ ಕೋರಿಶೆಟ್ಟರ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ.

ಇತಿಹಾಸ ಮತ್ತು ಪುರಾತತ್ವ ಕ್ಷೇತ್ರದಲ್ಲಿ ಸಲ್ಲಿಸಿದ ಕಾರ್ಯ ಗುರುತಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತದ ಇತಿಹಾಸ ಪೂರ್ವ ಮತ್ತು ಕರ್ನಾಟಕ ಸಂಸ್ಕೃತಿ, ಪರಂಪರೆ ಗುರುತಿಸುವ ಕೆಲಸ ಮಾಡಿದ್ದಾರೆ.

ಸಂಶೋಧನಾ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಇದೆ. ಹಲವರಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ್ದಾರೆ. ಅಂತರರಾಷ್ಟ್ರಿಯ ಮಟ್ಟದ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ವಿವಿಧ ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಟೆಪ್ರೊಕ್ರೊನಾಲಜಿ ಆಫ್‌ ವೊಲ್ಕಾನಿಕ್‌ ಆ್ಯಶ್‌ ಫ್ರಂ ಪೆನಿನ್ಸುಲಾರ್‌ ಇಂಡಿಯಾ 1989–1998’ ಸಹಿತ ವಿವಿಧ ಉತ್ಖನನ ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ಮೂಲತಃ ಬಳ್ಳಾರಿಯವರಾದ ರವೀಂದ್ರ ಕೋರಿಶೆಟ್ಟರ ಅವರು ನಗರದ ಶಿವಗಿರಿಯಲ್ಲಿ ನೆಲೆಸಿದ್ದಾರೆ. ಮರಿಸ್ವಾಮಿ ಮತ್ತು ಸರ್ವಮಂಗಳಾ ದಂಪತಿಯ ಪುತ್ರ. ರವೀಂದ್ರ ಅವರು ಬಳ್ಳಾರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿದರು. ಹುಬ್ಬಳ್ಳಿಯಲ್ಲಿ ಪದವಿ ಪಡೆದವರು ಪುಣೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1989ರಿಂದ 2013ರವರೆಗೆ ಬೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಭಾಗದ ಮುಖ್ಯಸ್ಥ, ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಬಳ್ಳಾರಿಯಲ್ಲಿ ಇತಿಹಾಸಪೂರ್ವ ಪ್ರಾಕ್ತನಕ್ಕೆ ಸಂಬಂಧಿಸಿದ ಅಪರೂಪದ ಮ್ಯೂಸಿಯಂ ಸ್ಥಾಪಿಸಿದ್ದೇನೆ. ಬಿಲಸರ‍್ಗಂ ಗುಹೆಗಳ ಉತ್ಖನನ ಯೋಜನೆಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಜನರಲ್ಲಿ ಇತಿಹಾಸ ಮತ್ತು ಪರಂಪರೆ ಅರಿವು ಮೂಡಿಸಲು ಶ್ರಮಿಸಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿಯಾಗಿದೆ
ರವೀಂದ್ರ ಕೋರಿಶೆಟ್ಟರ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.