ADVERTISEMENT

ಇ-ಪೌತಿ; ಸಾಧಕರಿಗೆ ₹5 ಕೋಟಿ ಪ್ರೋತ್ಸಾಹ ಧನ

ಪ್ರಗತಿ ಪರಿಶೀಲನಾ ಸಭೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:37 IST
Last Updated 10 ಫೆಬ್ರುವರಿ 2026, 6:37 IST
ಧಾರವಾಡದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು 
ಧಾರವಾಡದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು    

ಧಾರವಾಡ: ‘ರಾಜ್ಯದಲ್ಲಿ ಅಂದಾಜು 49 ಲಕ್ಷ ಜಮೀನುಗಳು ಇಂದಿಗೂ ಮೃತರ ಹೆಸರಿನಲ್ಲೇ ಇವೆ. ಈವರೆಗೆ 12 ಲಕ್ಷ ವಾರುಸುದಾರರಿಗೆ ಜಮೀನುಗಳ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಮಾರ್ಚ್‍ವರೆಗೆ ಪೌತಿ ಖಾತೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಗತಿ ಸಾಧಿಸಿದ ರಾಜ್ಯದ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ₹5 ಕೋಟಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಮೃತರ ಹೆಸರಿನಲ್ಲಿ ಜಮೀನುಗಳನ್ನು ವಾರಿಸುದಾರರಿಗೆ ಖಾತೆ ಮಾಡಿಕೊಡುವ ಇ-ಪೌತಿ ಖಾತೆ ಅಭಿಯಾನ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿ 58,212 ಪೌತಿ ಖಾತೆಗಳ ಪೈಕಿ 36,046 ಪ್ರಕರಣಗಳು ಮುಕ್ತಾಯವಾಗಿದ್ದು, ಬಾಕಿ ಇರುವ 4,896 ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಆಧಾರ್‌ ಸೀಡಿಂಗ್ ಪ್ರಗತಿಯಲ್ಲಿದ್ದು ಶೇ 85.80ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲಾಧಿಕಾರಿಗಳ ಕೋರ್ಟ್‍ನಲ್ಲಿ 9 ಮೇಲ್ಮನವಿ ಪ್ರಕರಣಗಳು, ಉಪವಿಭಾಗಧಿಕಾರಿಗಳ ಕೋರ್ಟ್‍ನಲ್ಲಿ 11 ಪ್ರಕರಣಗಳು, ವಿವಿಧ ತಹಶೀಲ್ದಾರ್ ಕೋರ್ಟ್‍ನಲ್ಲಿ 69 ಪ್ರಕರಣಗಳು ಬಾಕಿ ಇದ್ದು ಶೀಘ್ರದಲ್ಲಿ ಇತ್ಯರ್ಥ ಪಡಿಸಬೇಕು. ಭೂಮಿ ವಿಭಾಗದಲ್ಲಿನ ಬಾಕಿ ಪ್ರಕರಣಗಳನ್ನು ನಿಯಮಾನುಸಾರ ಮುಕ್ತಾಯಗೊಳಿಸಬೇಕು’ ಎಂದು ತಿಳಿಸಿದರು.

‘ಭೂವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳೇ ನ್ಯಾಯಾಲಯದಲ್ಲಿ ಹೆಚ್ಚಿವೆ. ಜಮೀನು ಅಳತೆಗೆ ಈವರೆಗೆ ಹಳೆಯ ವಿಧಾನ ಅನುಸರಿಸಲಾಗುತ್ತಿದೆ. `ರೋವರ್ಸ್’ ಉಪಕರಣವು ಅಳತೆಯಲ್ಲಿ ಇನ್ನಷ್ಟು ನಿಖರತೆಯನ್ನು ತರಲಿದೆ. ಅಲ್ಲದೇ ಸರ್ವೆಯರುಗಳ ಕೆಲಸದ ಒತ್ತಡ ಕಡಿಮೆ ಮಾಡಲಿದೆ. ಕೆಲಸದ ವೇಗ ಹೆಚ್ಚಾಗಲಿದೆ’ ಎಂದರು.

‘ದರ್ಖಾಸ್ತು ಮತ್ತು ಬಗರ್ ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳು ರೈತರ ಹೆಸರಿಗೆ ಪೋಡಿ ಆಗದೇ ಉಳಿದಿವೆ. ಇದರಿಂದ ರೈತರಿಗೆ ಬ್ಯಾಂಕ್ ಸಾಲ ಪಡೆಯಲು, ಪಾಲುವಿಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಲು `ನನ್ನ ಭೂಮಿ' ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ’ ಎಂದು ವಿವರಿಸಿದರು.

ಶಾಸಕ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಜಿಲ್ಲಾ ಪಂಚಾಯಿತಿ ಸಿಇಒ ಜಿಲ್ಲಾಧಿಕಾರಿ ಭುವನೇಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಐಎಎಸ್ ಪ್ರೊಬೆಷನರಿ ಅಧಿಕಾರಿ ರೀತಿಕಾ ವರ್ಮಾ ಇದ್ದರು.

ಭೂ ಸುರಕ್ಷಾ ಯೋಜನೆಯಡಿ 64.50 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಜನರು ಆನ್‍ಲೈನ್ ಮೂಲಕವೇ ತಮ್ಮ ದಾಖಲೆಗಳನ್ನು ಪಡೆದುಕೊಳ್ಳಬಹುದು
ಕೃಷ್ಣ ಬೈರೇಗೌಡ ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.