ADVERTISEMENT

ಕಸಾಪ ಚುನಾವಣೆ: ಗರಿಗೆದರುತಲಿದೆ ಕಸರತ್ತು

ಪ್ರಮುಖ ಮತದಾರರ ವಿಶ್ವಾಸ ಗಳಿಸಲು ಅಂಗಡಿ, ರಾಮು ಮೂಲಗಿ ಯತ್ನ

ಪ್ರಮೋದ
Published 19 ಫೆಬ್ರುವರಿ 2021, 3:47 IST
Last Updated 19 ಫೆಬ್ರುವರಿ 2021, 3:47 IST
ಲಿಂಗರಾಜ ಅಂಗಡಿ
ಲಿಂಗರಾಜ ಅಂಗಡಿ   

ಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಎರಡೂವರೆ ತಿಂಗಳು ಬಾಕಿ ಇರುವಾಗಲೇ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಜಾನಪದ ಕಲಾವಿದ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಮು ಮೂಲಗಿ ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲೇ ಸಾಹಿತ್ಯ ವಲಯದ ಪ್ರಮುಖರನ್ನು ಭೇಟಿಯಾಗಿ ಹಾಗೂ ಫೋನ್‌ ಮೂಲಕ ಮಾತನಾಡಿ ‘ಪ್ರಾಥಮಿಕ’ ಹಂತದ ಪ್ರಚಾರ ಆರಂಭಿಸಿದ್ದಾರೆ. ಅಂಗಡಿ ಅವರು 2012 ಹಾಗೂ 2016ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈಗ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ.

ಹಾಲಿ ಅಧ್ಯಕ್ಷರ ಅಧಿಕಾರದ ಅವಧಿ ಮಾ.3ರಂದು ಪೂರ್ಣಗೊಳ್ಳಲಿದ್ದು, 29ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏ. 8ರಂದು ನಾಮಪತ್ರಗಳ ಪರಿಶೀಲನೆ, 12ರಂದು ಹಿಂಪಡೆಯಲು ಕೊನೆಯ ದಿನ. ಮೇ 9ರಂದು ಚುನಾವಣೆ ನಿಗದಿಯಾಗಿದೆ.

ADVERTISEMENT

ಸಭೆ, ಸಮಾರಂಭಗಳಲ್ಲಿ ಪರಿಷತ್‌ನ ಮತದಾರರು ಭೇಟಿಯಾದಾಗ ‘ಇನ್ನೊಂದು ಅವಧಿಗೆ ಆಯ್ಕೆ ಬಯಸಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದು ಅಂಗಡಿ ಅವರು ಪ್ರಚಾರ ಮಾಡುತ್ತಿದ್ದರೆ; ‘ಹೊಸಬರು ಬಂದರೆ ಹೊಸ ಕೆಲಸಗಳಾಗುತ್ತವೆ. ನನಗೊಂದು ಅವಕಾಶ ಕೊಡಿ’ ಎಂದು ರಾಮುಮೂಲಗಿ ಹೇಳುತ್ತಿದ್ದಾರೆ. ಇದಕ್ಕಾಗಿ ರಾಮು ಮೂಲಗಿ ಹುಬ್ಬಳ್ಳಿ, ಧಾರವಾಡ ನಗರ ಮತ್ತು ಕಲಘಟಗಿ
ಯಲ್ಲಿ ಸಾಹಿತಿಗಳನ್ನು ಭೇಟಿಯಾಗಿದ್ದಾರೆ.

ಅವಳಿ ನಗರದ ತಾಲ್ಲೂಕುಗಳೇ ನಿರ್ಣಾಯಕ: ಜಿಲ್ಲೆಯಲ್ಲಿ ಒಟ್ಟು 5,684 ಮತದಾರರಿದ್ದು, ಹುಬ್ಬಳ್ಳಿ–ಧಾರವಾಡ ತಾಲ್ಲೂಕುಗಳ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಧಾರವಾಡ ತಾಲ್ಲೂಕಿನಲ್ಲಿ 2,075 ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ 1,904 ಮತದಾರರು ಇದ್ದಾರೆ. ಕಲಘಟಗಿ (218), ಕುಂದಗೋಳ (764) ಮತ್ತು ನವಲಗುಂದ (723) ಮತದಾರರು ಇದ್ದಾರೆ. ಹೊಸ ತಾಲ್ಲೂಕುಗಳು ಸೇರಿದಂತೆ ಹುಬ್ಬಳ್ಳಿ ಮತ್ತು ಧಾರವಾಡ ನಗರದ ಮತದಾರರ ಪಟ್ಟಿ ಪ್ರತ್ಯೇಕವಾಗಿ ಪ್ರಕಟವಾಗಲಿದೆ. ಪರಿಷತ್‌ನ ಸದಸ್ಯರಾಗಿ ಮೂರು ವರ್ಷ ಪೂರ್ಣಗೊಂಡವರಿಗೆ ಮತದಾನದ ಹಕ್ಕಿದೆ.

ಇಬ್ಬರೂ ಆಕಾಂಕ್ಷಿಗಳು ನಗರ ಪ್ರದೇಶಗಳ ಮತದಾರರತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ‘ಸಾಹಿತ್ಯಿಕ ಚಟುವಟಿಕೆಗಳೇ ಪ್ರಧಾನವಾಗಿ ನಡೆಯಬೇಕಾದ ಸಾಹಿತ್ಯ ಪರಿಷತ್‌ಗೆ ಸಾಹಿತಿಯೇ ಅಧ್ಯಕ್ಷರಾಗಿರ
ಬೇಕೆಂದು ಮತದಾರರು ಬಯಸುತ್ತಿದ್ದಾರೆ. ಹೊಸಬರನ್ನು ಆಯ್ಕೆ ಮಾಡಬೇಕು ಎನ್ನುವ ಒಲವೂ ಇದೆ. ಬೇರೆಯವರಿಗೂ ಅವಕಾಶ ಸಿಗಬೇಕಲ್ಲವೇ’ ಎಂದು ರಾಮು ಮೂಲಗಿ ಪ್ರಶ್ನೆಯಾಗಿದೆ.

‘ನನ್ನ ಅಧಿಕಾರದ ಅವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದೇನೆ. ವರ್ಷಕ್ಕೆ 20 ಇದ್ದ ದತ್ತಿ ಕಾರ್ಯಕ್ರಮಗಳನ್ನು 75ಕ್ಕೆ ಹೆಚ್ಚಿಸಿದ್ದೇನೆ. ಸಾರ್ವಜನಿಕರಿಂದ ನಯಾಪೈಸೆ ಪಡೆಯದೆ ಏಳು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಮಾಡಿ
ದ್ದೇನೆ. ಹೀಗಾಗಿ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಮತ್ತೆ ನಾನೇ ಅಧ್ಯಕ್ಷನಾಗಬೇಕೆಂದು ಬಯಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.