ಹುಬ್ಬಳ್ಳಿ: ಸಾಕಷ್ಟು ಹಣ ಖರ್ಚು ಮಾಡಿ ಅಭಿವೃದ್ದಿಪಡಿಸಲಾದ ನಗರದ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಕೆಂಪಕೆರೆ ಉದ್ಯಾನವು ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದೆ.
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 73ರಲ್ಲಿ ಕೆರೆ ಇದೆ. ಅಂತಿಮ ಹಂತದ ಕಾಮಗಾರಿಯನ್ನು ಪೂಣಗೊಳಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲೇ ಉದ್ಯಾನವನ್ನು ಉದ್ಘಾಟಿಸಬೇಕಿತ್ತು. ಆದರೆ, ಅದು ನೆರವೇರಿಲ್ಲ.
ಪ್ರವಾಸೋದ್ಯಮ ಇಲಾಖೆಯ ₹5 ಕೋಟಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ₹1.50 ಕೋಟಿ ಮತ್ತು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ₹3.50 ಕೋಟಿ ಅನುದಾನದಲ್ಲಿ ಕೆರೆ ಉದ್ಯಾನ ಅಭಿವೃದ್ದಿಪಡಿಸಲಾಗಿದೆ.
ಮೊದಲ ಹಂತದಲ್ಲಿ ಕೆರೆಯ ಬಂಡ್ ಅಭಿವೃದ್ಧಿಪಡಿಸಿ, ಹೂಳೆತ್ತಲಾಗಿದೆ. ಪ್ರವೇಶ ದ್ವಾರ, ಕೆರೆ ಸುತ್ತ ಒಂದು ಕಿ.ಮೀ ಪಾದಚಾರಿ ಮಾರ್ಗ, ತಡೆಗೋಡೆ, ಅರ್ಬನ್ ಪಾರೆಸ್ಟ್ರಿ, ಸಣ್ಣ ತೆರೆದ ಸಭಾಂಗಣ, ಎರಡು ಕಡೆ ವೀಕ್ಷಣಾ ಗೊಪುರ, ಫುಡ್ ಕೋರ್ಟ್ ನಿರ್ಮಿಸಲಾಗಿದ್ದು, ಉದ್ಯಾನಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಇಡೀ ಕೆರೆಯನ್ನು ಜಲಕಳೆ ಆವರಿಸಿದ್ದು, ಕೆರೆಯ ಅಂದ ಹಾಳಾಗಿದೆ. ಅಲ್ಲದೆ, ಕೆರೆಯ ನೀರು ಕಲುಷಿತಗೊಂಡು, ಕಪ್ಪು ಬಣ್ಣಕ್ಕೆ ತಿರುಗಿದೆ. ಎಲ್ಲೆಂದರಲ್ಲಿ ಕಸ, ಮುಳ್ಳುಕಂಟಿಗಳು ಬೆಳೆದಿವೆ. ಮಕ್ಕಳು ಆಟವಾಡಲು ಅಳವಡಿಸಿದ್ದ ಆಟಿಕೆಗಳು ಸಹ ಹಾಳಾಗುವ ಹಂತದಲ್ಲಿವೆ.
ಉದ್ಯಾನದ ಪ್ರವೇಶ ದ್ವಾರಕ್ಕೆ ಬೀಗ ಹಾಕಲಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ತ್ಯಾಜ್ಯ, ಕಟ್ಟಡ ಅವಶೇಷಗಳನ್ನು ಸುರಿಯಾಗಿದೆ. ಆಲಂಕಾರಿಕ ಗಿಡಗಳು ನಿರ್ವಹಣೆ ಇಲ್ಲದೆ ಒಣಗುತ್ತಿವೆ.
‘ಉದ್ಯಾನವನ್ನು ಉದ್ಘಾಟಿಸಿ, ನಿರ್ವಹಣೆಗೆ ಟೆಂಡರ್ ಕರೆಯುವವರೆಗೆ ಪಾಲಿಕೆಯೇ ನಿರ್ವಹಿಸಬೇಕು ಎಂದು ಸ್ಥಳೀಯ ಶಾಸಕರು ಸೂಚಿಸಿದ್ದಾರೆ. ಆದರೆ, ಉದ್ಯಾನ ಉದ್ಘಾಟನೆ ಆಗಿಲ್ಲ. ನಿರ್ವಹಣೆಯೂ ಆಗುತ್ತಿಲ್ಲ’ ಎಂದು ಸ್ಥಳೀಯರು ತಿಳಿಸಿದರು.
Highlights - ಮೂರ್ನಾಲ್ಕು ವರ್ಷಗಳಿಂದ ಕಾಮಗಾರಿ ನನೆಗುಗಿದೆ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಉದ್ಯಾನ ಉದ್ಘಾಟನೆಗೆ ಸ್ಥಳೀಯರ ಆಗ್ರಹ
Quote - ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಉದ್ಯಾನವನ್ನು ಸಾರ್ವಜನಿಕರ ಬಳಕೆಗೆ ನೀಡಬೇಕು. ಈ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಶೀಲಾ ಕಾಟಕರ್ ಸದಸ್ಯೆ ಹು–ಧಾ ಮಹಾನಗರ ಪಾಲಿಕೆ
Quote - ಬೆಳಿಗ್ಗೆ ಸಂಜೆ ವಾಯುವಿಹಾರಿಗಳಿಗೆ ಉಚಿತವಾಗಿ ಪ್ರವೇಶ ನೀಡುವ ಉದ್ದೇಶವಿದೆ. ಉಳಿದ ಸಮಯದಲ್ಲಿ ಪ್ರವೇಶ ಶುಲ್ಕ ಇರುತ್ತದೆ. ಉದ್ಯಾನ ಉದ್ಘಾಟನೆ ಬಳಿಕ ನಿರ್ವಹಣೆಗೆ ಟೆಂಡರ್ ಕರೆಯುತ್ತೇವೆ. ಅಧಿಕಾರಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
Cut-off box - ಕೆರೆ ಒಡಲಿಗೆ ಕೊಳಚೆ ನೀರು ‘ಯಾವುದೇ ಜಲಮೂಲಗಳಿಗೆ ಕೊಳಚೆ ನೀರನ್ನು ಸಂಸ್ಕರಿಸದೆ ಬಿಡಬಾರದು ಎಂಬ ನಿಯಮವಿದೆ. ಆದರೆ ಕೆಂಪಕೆರೆ ವಿಷಯದಲ್ಲಿ ಅದು ಪಾಲನೆ ಆಗುತ್ತಿಲ್ಲ. ಕೆರೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ. ಧಾರವಾಡ ಪ್ಲಾಟ್ ಹಣಪಿ ಟೌನ್ ಕಡೆಯಿಂದ ಬರುವ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಗಬ್ಬೆದ್ದು ನಾರುತ್ತಿದೆ. ಮಹಾನಗರ ಪಾಲಿಕೆಯವರು ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.