ADVERTISEMENT

ಫ್ಲೈಓವರ್ ಕಾಮಗಾರಿ: ಕೆ.ಎಚ್.‌ ಪಾಟೀಲ ಪ್ರತಿಮೆ ಸ್ಥಳಾಂತರ

ಮುನ್ಸೂಚನೆ ನೀಡದೆ ಸ್ಥಳಾಂತರ ಆರೋಪ: ಕಾಂಗ್ರೆಸ್ ಶಾಸಕಿ, ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 9:04 IST
Last Updated 1 ಫೆಬ್ರುವರಿ 2023, 9:04 IST
   

ಹುಬ್ಬಳ್ಳಿ: ನಗರದ ಈಜುಕೋಳದ ಬಳಿ‌‌ ಇರುವ ಶಾಸಕ ಎಚ್.ಕೆ. ಪಾಟೀಲ ಅವರ ತಂದೆ, ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಅವರ ಪ್ರತಿಮೆಯನ್ನು, ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸ್ಥಳಾಂತರಿಸಲಾಗಿದೆ. ಬಸವ ವನದಲ್ಲಿದ್ದ ಬಸವೇಶ್ವರ ಪ್ರತಿಮೆಯ ಸ್ಥಳಾಂತರದ ಬೆನ್ನಲ್ಲೇ, ಪಾಟೀಲ ಅವರ ಪ್ರತಿಮೆಯನ್ನು ಸಹ ಇಂದಿರಾ ಗಾಜಿನ ಮನೆಗೆ ಸ್ಥಳಾಂತರ ಮಾಡಲಾಗಿದೆ.

ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್ ಮುಖಂಡರು ಹಾಗೂ ಕೆ.ಎಚ್. ಪಾಟೀಲ‌ ಪ್ರತಿಷ್ಠಾನದ ಪದಾಧಿಕಾರಿಗಳು ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ‌ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನ್ಸೂಚನೆ ನೀಡದೆ ಸ್ಥಳಾಂತರ ಮಾಡಿದ್ದಕ್ಕಾಗಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಪ್ರತಿಮೆ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳ ನ‌ಡೆ ಪ್ರಶ್ನಾರ್ಹವಾಗಿದೆ. ಸಂಬಂಧಪಟ್ಟವರಿಗೆ‌ ಮಾಹಿತಿ ನೀಡಿ ತೆರವು ಕಾರ್ಯಾಚರಣೆ ನಡೆಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಅಭಿವೃದ್ಧಿ ವಿಚಾರಕ್ಕೆ ನಾವು ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಫ್ಲೈ ಓವರ್ ಕಾಮಗಾರಿಗೆ ಪಾಟೀಲ ಅವರ ಪ್ರತಿಮೆ ಅಡಚಣೆ ಆಗಿದ್ದರೇ ನಮಗೆ ತಿಳಿಸಬೇಕಿತ್ತು. ನಾವೇ ಸ್ಥಳಾಂತರ ಮಾಡಿಕೊಳ್ಳುತ್ತಿದ್ದೇವು. ಆದರೆ ಕಳ್ಳರಂತೆ ರಾತ್ರೋರಾತ್ರಿ ಸ್ಥಳಾಂತರ ಮಾಡಿ, ಸಹಕಾರಿ ರಂಗಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಇತಿಹಾಸ ಮತ್ತು ಸಾಧನೆ ಅರಿಯದೇ ಹೊಲಸು ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ವಸಂತ ಲದ್ವಾ ಮಾತನಾಡಿ, ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಕೃತ್ಯ. ಕಾಂಗ್ರೆಸ್ ಪಕ್ಷ ಹಾಗೂ ಸಹಕಾರಿಗಳು ಇದನ್ನು ಖಂಡಿಸುತ್ತೇವೆ. ಕಾನೂನು ಬಾಹಿರವಾಗಿ ತೆರವು ಗೊಳಿಸಿರುವ ಅಧಿಕಾರಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಶೀಘ್ರದಲ್ಲೇ ಈ ಬಗ್ಗೆ ಚರ್ಚಿಸಿ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದ ಪಾಲಿಕೆಯ ಸಹಾಯಕ ಆಯುಕ್ತ ಬಿ.ಎಂ. ಮಲ್ಲಿಕಾರ್ಜುನ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಲ್ಲಿಕಾರ್ಜುನ ಮಾತನಾಡಿ, ಏಳೆಂಟು ತಿಂಗಳ ಹಿಂದೆಯೇ ಪ್ರತಿಮೆ ಸ್ಥಳಾಂತರ ಕುರಿತು ಸಭೆ ಆಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಸೇರಿದಂತೆ ಹಲವರು ಭಾಗಿಯಾಗಿದ್ದ ಸಭೆಯಲ್ಲಿ ಮೂರ್ತಿ ತೆರವಿಗೆ ನಿರ್ಧಾರ ಮಾಡಲಾಗಿತ್ತು. ಅದರಂತೆ ಸ್ಥಳಾಂತರ ಮಾಡಲಾಗಿದೆ ಎಂದರು.

ಇದರಿಂದ ಮತ್ತಷ್ಟು ಕೆರಳಿದ ಮುಖಂಡರು, ತೆರವುಗೊಳಿಸುವ ಮುನ್ನ ನಮ್ಮ ಗಮನಕ್ಕೆ ಯಾಕೆ ತರಲಿಲ್ಲ. ನೀವು ಬಿಜೆಪಿ ಏಜೆಂಟ್‌ಗಳಂತೆ ವರ್ತಿಸುತ್ತಿದ್ದೀರಿ ಎಂದು ಹರಿಹಾಯ್ದರು.

ಸಭೆಯ ನಡಾವಳಿ ಪ್ರತಿಯನ್ನು ನೀಡಬೇಕು. ಜೊತೆಗೆ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಆದರೆ, ಪಾಲಿಕೆ ಆಯುಕ್ತರು ತರಬೇತಿಗಾಗಿ ಬೇರೆಡೆಗೆ ಹೋಗಿರುವ ವಿಷಯ ತಿಳಿದು, ಹೋರಾಟ‌ ಕೈಗೊಳ್ಳುವ ನಿರ್ಧಾರದೊಂದಿಗೆ ಸ್ಥಳದಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.