ಅಳ್ನಾವರ: ಇಲ್ಲಿನ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಬಸ್ ನಿಲ್ದಾಣಕ್ಕೆ ಸೋಮವಾರ ಮಧ್ಯಾಹ್ನ ಇಲಾಖೆಯ ಅಧಿಕಾರಿಗಳ ತಂಡದ ಜೊತೆ ಭೇಟಿ ನೀಡಿದ ಅವರು, ನಿಲ್ದಾಣದ ಆವರಣದಲ್ಲಿ ಸುತ್ತಾಡಿ ಅವ್ಯವಸ್ಥೆಯನ್ನು ಕೂಡಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಸ, ಕೊಳಚೆ, ಸ್ವಚ್ಚತೆಯಿಲ್ಲದ ಆವರಣ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮತ್ತಿತರ ಅವ್ಯವಸ್ಥೆಗಳನ್ನು ಕಂಡು ಗರಂ ಆದ ಅವರು, ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜೊತೆಗೆ ಪ್ರಯಾಣಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಖಾಸಗಿ ವಾಹನಗಳಿಗೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ನಿಗದಿತ ಜಾಗ ಗುರುತುಪಡಿಸಬೇಕು. ಪಾರ್ಕಿಂಗ್ ಶುಲ್ಕ ಆಕರಿಸಬೇಕು. ಗ್ರಾಮೀಣ ಭಾಗದ ಸಾರಿಗೆ ಸುಧಾರಣೆಗೆ ಕಾಳಜಿ ವಹಿಸಲು ತಿಳಿಸಿದರು.
ಇದೇ ಸಮಯದಲ್ಲಿ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಪ್ರಿಯಾಂಗಾ ಅವರ ಗಮನಕ್ಕೆ ತಂದರು. ಖಾಸಗಿ ವಾಹನಗಳು ನಿಲ್ದಾಣದೊಳಗೆ ಬಂದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಗ್ರಾಮೀಣ ಭಾಗದ ಬಸ್ ನಿಗದಿತ ಸಮಯದಲ್ಲಿ ಓಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದೂರಿದರು.
ಅಂತರರಾಜ್ಯ ಸಾರಿಗೆ ಬಸ್ ಸಂಚಾರಕ್ಕೆ ಅಳ್ನಾವರ ನಿಲ್ದಾಣದ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬೇಕು. ನಿಲ್ದಾಣದಲ್ಲಿ ರಸ್ತೆಗೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದರು.
ನಿಲ್ದಾಣದಲ್ಲಿ ಕುಡಿಯುವ ನೀರು, ಆಸನಗಳ ವ್ಯವಸ್ಥೆ ಜೊತೆಗೆ ನಿಗದಿತ ಸಮಯಕ್ಕೆ ಬಸ್ಸುಗಳನ್ನು ಓಡಿಸುವುದು ಸೇರಿದಂತೆ ವಿವಿದ ದೂರುಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಪ್ರಿಯಾಂಗಾ ಅವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.