ADVERTISEMENT

ಹುಬ್ಬಳ್ಳಿ – ಹೈದರಾಬಾದ್‌ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:48 IST
Last Updated 29 ಸೆಪ್ಟೆಂಬರ್ 2020, 16:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೊರೊನಾದಿಂದಾಗಿ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ – ಹೈದರಾಬಾದ್ ಬಸ್ ಸಂಚಾರವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮತ್ತೆ ಆರಂಭಿಸಿದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ, ಸುರಕ್ಷತಾ ಕ್ರಮಗಳೊಂದಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಬಸ್ಸುಗಳು ಹೊರಡುತ್ತವೆ ಎಂದು ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಂಗಳವಾರ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 1 ಎಸಿ ಸ್ಲೀಪರ್ (ರಾತ್ರಿ 8 ಕ್ಕೆ), 1 ನಾನ್ ಎಸಿ ಸ್ಲೀಪರ್ (ಸಂಜೆ 7ಕ್ಕೆ), 1 ರಾಜಹಂಸ( ಸಂಜೆ 7ಕ್ಕೆ) ಹಾಗೂ 2 ವೇಗದೂತ ಬಸ್ಸುಗಳ (ಬೆಳಿಗ್ಗೆ 7 ಮತ್ತು 8ಕ್ಕೆ) ಸಂಚಾರ ಆರಂಭಿಸಲಾಗಿದೆ. ಬೆಳಿಗ್ಗೆ 7ಕ್ಕೆ ಹೊರಡುವ ವೇಗದೂತ ಮತ್ತು ಎಲ್ಲಾ ಐಶಾರಾಮಿ ಬಸ್ಸುಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

ADVERTISEMENT

ಬೆಳಿಗ್ಗೆ 8ಕ್ಕೆ ಹೊರಡುವ ವೇಗದೂತ ಬಸ್ಸು ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ, ವೋಲ್ವೊ ಬಸ್ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು.

ಎಲ್ಲಾ ಬಸ್ಸುಗಳಿಗೆ ಆನ್‌ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರ್‌ಗಳ ಮೂಲಕ ಸೀಟು ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಬಸ್ಸಿನಲ್ಲಿ ಹೊದಿಕೆ ಮತ್ತು ನೀರಿನ ಬಾಟಲಿಗಳನ್ನು ನೀಡುವುದಿಲ್ಲ ಎಂದು ರಾಮನಗೌಡರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.