ಹುಬ್ಬಳ್ಳಿ: ಸಾರಿಗೆ ನಿಗಮದ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಎಸ್ಮಾ ಜಾರಿ ಮಾಡಿದೆ. ‘ಎಂದಿನಂತೆ ಬಸ್ ಸಂಚಾರ ಇರಲಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೇಳಿದರೆ, ‘ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬಸ್ ಸೇವೆ ಇರಲಿದೆಯೋ, ಇಲ್ಲವೋ ಎಂಬುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
‘ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆಯಿಂದ ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆ ಸಹ ಬೆಂಬಲಿಸಿದ್ದು, ನಮ್ಮ ಸಿಬ್ಬಂದಿ ಬೆಳಿಗ್ಗೆ 6ರಿಂದ ಮುಷ್ಕರದಲ್ಲಿ ಪಾಲ್ಗೊಳ್ಳುವರು’ ಎಂದು ಕೆ.ಎಸ್.ಆರ್.ಟಿ.ಸಿ. ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಕಾರ್ಯಾಧ್ಯಕ್ಷ ಆರ್.ಎಫ್. ಕವಳಿಕಾಯಿ ತಿಳಿಸಿದ್ದಾರೆ.
‘ಸೋಮವಾರ ಮಧ್ಯಾಹ್ನ ಕರ್ತವ್ಯ ಮುಗಿಸಿ ಬಂದ ಸಾವಿರಾರು ಸಿಬ್ಬಂದಿ ಈಗಾಗಲೇ ಮನೆಗಳಿಗೆ ತೆರಳಿದ್ದಾರೆ. ಎಸ್ಮಾ ಜಾರಿ ಮಾಡುವುದು ಸಾಮಾನ್ಯ. ಇಲಾಖೆ ಯಾವುದೇ ಕ್ರಮ ಕೈಗೊಂಡರೂ ನಾವು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಜತೆ ನಡೆದ ಮಾತುಕತೆ ವಿಫಲವಾಗಿದೆ. ಅದರ ನಂತರ ಒಂದು ದಿನ ಮುಷ್ಕರ ಮುಂದೂಡಿ ಎಂದು ಕೋರ್ಟ್ ಆದೇಶ ಬಂದಿದೆ’ ಎಂದು ಅವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ., ‘ಸಂಸ್ಥೆಯ ವ್ಯಾಪ್ತಿಯಲ್ಲಿ ಮಂಗಳವಾರ ಬಸ್ ಸೇವೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಎಲ್ಲ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸಂಸ್ಥೆಯ ನೌಕರರಿಗೆ ನೋ ವರ್ಕ್, ನೋ ಪೇಮೆಂಟ್ ಸೂಚನೆಯನ್ನು ನೋಟಿಸ್ ಮೂಲಕ ತಿಳಿಸಿ, ಎಸ್ಮಾ ಜಾರಿ ಮಾಡಲಾಗಿದೆ’ ಎಂದರು.
‘ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ. ಹೈಕೋರ್ಟ್ ಸಹ ಸೂಚನೆ ನೀಡಿದೆ. ಸರ್ಕಾರದ ತೀರ್ಮಾನ ಬರುವವರೆಗೆ ನೌಕರರು ತಾಳ್ಮೆಯಿಂದ ಇರಬೇಕು. ಕಾರ್ಮಿಕ ಸಂಘಟನೆಗಳಿಗೂ ಸಲಹೆ ನೀಡಲಾಗಿದೆ. ಒಂದು ವೇಳೆ ಮುಷ್ಕರ ನಡೆಸಿದರೆ, ಕರ್ತವ್ಯಕ್ಕೆ ಗೈರಾದರೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಚಿಗರಿ ಬಸ್ ಸಂಚಾರ ಬಂದ್’
‘ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಘಟಕದ ವ್ಯಾಪ್ತಿಯಲ್ಲಿ ಐದು ಸಾವಿರ ಚಾಲಕ, ನಿರ್ವಾಹಕ ಸಿಬ್ಬಂದಿಯಿದ್ದು, ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿ–ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್‌ಗಳ ಸಂಚಾರ ಸಹ ಬೆಳಿಗ್ಗೆ 6ರಿಂದ ಸ್ಥಗಿತವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಕಾರ್ಮಿಕ ಮುಖಂಡ ಆರ್.ಎಫ್ ಕವಳಿಕಾಯಿ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.