ADVERTISEMENT

ಭೂ ಹಂಚಿಕೆ ಪ್ರಕರಣ: ಕುಂಬಾರಕೊಪ್ಪ ಗ್ರಾಮದಲ್ಲಿ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 5:07 IST
Last Updated 11 ಫೆಬ್ರುವರಿ 2026, 5:07 IST
ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಪ್ರಬಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಮಾತನಾಡಿದರು.
ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಪ್ರಬಾರಿ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಮಾತನಾಡಿದರು.   

ಅಳ್ನಾವರ: ಜಮೀನು ಮಂಜೂರು ಬೇಡಿಕೆ ಮುಂದಿಟ್ಟುಕೊಂಡು ಕುಂಬಾರಕೊಪ್ಪ ಗ್ರಾಮದಲ್ಲಿ ಶಾಂತಿ ಕದಡಲು ಮುಂದಾಗದೇ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದರು.

ತಾಲ್ಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ದಾಖಲಾಗಿರುವ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಗ್ರಾಮದ ಸಿದ್ದಾರೂಢ ಮಠದಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿ, ಗ್ರಾಮದ ಒಂದು ಸಾವಿರಕ್ಕೂ ಅಧಿಕ ಎಕರೆ ಸರ್ಕಾರಿ ಜಮೀನು ಸಾಗುವಳಿದಾರರಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ. ಸರ್ಕಾರದ ಮಾನದಂಡಗಳನ್ವಯ ಜಮೀನು ಮಂಜೂರು ಮಾಡಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಪ್ರತಿಫಲ ದೊರೆಯುತ್ತದೆ. ಬೇಡಿಕೆಗಾಗಿ ಕಂದಾಯ ಇಲಾಖೆಗೆ ಮನವಿ ಕೊಡಬೇಕು. ಕಾನೂನು ಕೈಗೆತ್ತಿಕೊಳ್ಳುವ ಘಟನೆಗೆ ಆಸ್ಪದ ನೀಡಬಾರದು ಎಂದರು.

ಎಸ್.ಪಿ ಗುಂಜನ್ ಆರ್ಯ ಮಾತನಾಡಿ, ಅನ್ಯರಿಗೆ ತೊಂದರೆಯಾಗುವ ರೀತಿಯಲ್ಲಿ ದಬ್ಬಾಳಿಕೆ ನಡೆಸದೆ ನ್ಯಾಯಯುತ ಹೋರಾಟ ನಡೆಸಬೇಕು. ಪ್ರತಿಯೊಬ್ಬರು ಶಾಂತಿಯಿಂದ ಬಾಳಬೇಕು. ಬರುವ ದಿನಗಳಲ್ಲಿ ಯಾರಲ್ಲಿಯೂ ಮನಸ್ಥಾಪ ಇಟ್ಟುಕೊಳ್ಳದೆ ಸೌಹಾರ್ದಯುತವಾಗಿ ಬದುಕು ಸಾಗಿಸಬೇಕು ಎಂದರು.

ADVERTISEMENT

ಪಜಾ, ಪ.ಪಂ ಸಮಾಜದ ಮುಖಂಡರಾದ ಅಶೋಕ ದೊಡಮನಿ ಮತ್ತು ವೆಂಕಟೇಶ ಸಗಬಾಲ, ಪ್ರವೀಣ ಪವಾರ ಮಾತನಾಡಿ, ಸಂವಿಧಾನ ನೀಡಿರುವ ವಿಶೇಷ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವ ಮನೋಪ್ರವೃತ್ತಿಯಿಂದ ದೂರವಿರಬೇಕು. ಈಚೆಗೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಘಟನೆಗಳು ಹೆಚ್ಚಾಗುತ್ತಿವೆ. ಅದಕ್ಕೆ ಆಸ್ಪದ ಕೊಡಬಾರದು. ಜಾತಿ ನಿಂದನೆ ಪ್ರಕರಣ ವೈಯಕ್ತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳದೆ ಸಮಾಜದ ಸುಧಾರಣೆಗೆ ಉಪಯುಕ್ತವಾಗಿರಬೇಕು ಎಂದರು.

ಜಮೀನು ಸಾಗುವಳಿ ಮಾಡುತ್ತಿರುವ ರೈತರು ಹಕ್ಕುಪತ್ರ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಬಗರ್ ಹುಕುಂ ಕಾಯ್ದೆ ಪ್ರಕಾರ ಪರಿಶೀಲನೆ ಮಾಡಿ, ಜಮೀನು ಮಂಜೂರಾತಿಗೆ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಉಪ ವಿಭಾಗಾಧಿಕಾರಿ ಶಾಲಂ ಹುಸೇನ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ, ಸಚಿವ್ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಪಂ ಇಒ ಪ್ರಶಾಂತ ತುರ್ಕಾಣಿ, ಪಿಎಸ್‍ಐ ಬಸವರಾಜ ಯದ್ದಲಗುಡ್ಡ ಹಾಗೂ ಜಿಲ್ಲಾ ಜಾಗೃತ ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.

ಪ್ರಕರಣದ ಹಿನ್ನೆಲೆ

1957 ರಲ್ಲಿ ಆಹಾರ ಸಮಸ್ಯೆ ಉಂಟಾದಾಗ ಪಡ (ಸಾಗುವಳಿ ರಹಿತ) ಜಮೀನನ್ನು ಸಾಗುವಳಿ ಮಾಡಿ ಅದರಿಂದ ಬರುವ ಕೃಷಿ ಉತ್ಪನ್ನವನ್ನು ದೇಶದ ಬೆಳವಣಿಗೆಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಮುಂದಾದ ಪ್ರಯುಕ್ತ ಗ್ರಾಮದ ರೈತರಿಗೆ ಒಂದು ಸಾವಿರಕ್ಕೂ ಅಧಿಕ ಜಮೀನನ್ನು ಕೃಷಿ ಸಾಗುವಳಿಗೆ ಅವಕಾಶ ನೀಡಿತ್ತು. ಅಂದಿನಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಆ ಜಮೀನು ಮಂಜೂರು ಮಾಡಲು ಸರ್ಕಾರ ಮುಂದಾಗಿದ್ದು ಇದಕ್ಕೆ ಅರ್ಜಿ ಸಲ್ಲಿಸದ ಅನೇಕರು ಸಾಗುವಳಿ ಭೂಮಿಯಲ್ಲಿ ಬೆಳೆದ ಬೆಳೆಗಳನ್ನು ಹಾಳು ಮಾಡಿದ ಘಟನೆಗೆ ಸಂಬಂಧಿಸಿದಂತೆ ಕಳೆದ ಹತ್ತು ದಿನದಲ್ಲಿ ಗ್ರಾಮದಲ್ಲಿ ಹಲವು ಬಾರಿ ಶಾಂತಿ ಭಂಗ ಘಟನೆಗಳು ನಡೆದಿದ್ದವು. ನಾಲ್ಕು ಪ್ರಕರಣಗಳು ಅಳ್ನಾವರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಯುಕ್ತ ಶಾಂತಿ ಸಭೆ ಆಯೋಜಿಸಲಾಗಿತ್ತು. ಅರ್ಜಿ ಸಲ್ಲಿಸದವರು ಹಾಗೂ ಸಾಗುವಳಿದಾರರಲ್ಲದವರು ಈಗ ನಮಗೂ ಜಮೀನು ನೀಡುವಂತೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿರುವುದೇ ಈ ಘಟನೆಗೆ ಮೂಲ ಕಾರಣ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.