ADVERTISEMENT

ಅಂತರಗಂಗೆ ತೆರವಿಗೆ ಕೆರೆ ನೀರು ಖಾಲಿ: ಬೇಸಿಗೆಯಲ್ಲಿ ಅಧಿಕಾರಿಗಳ ಅವೈಜ್ಞಾನಿಕ ಕ್ರಮ

ಬಿರುಬೇಸಿಗೆಯಲ್ಲಿ ಅಧಿಕಾರಿಗಳಿಂದ ಅವೈಜ್ಞಾನಿಕ ಕ್ರಮ

ಇ.ಎಸ್.ಸುಧೀಂದ್ರ ಪ್ರಸಾದ್
Published 26 ಮಾರ್ಚ್ 2021, 4:56 IST
Last Updated 26 ಮಾರ್ಚ್ 2021, 4:56 IST
ಧಾರವಾಡದ ಸೋಮೇಶ್ವರ ಕೆರೆ ಅಂಗಳದಲ್ಲಿ ಯಂತ್ರಗಳ ಕಾರ್ಯಾಚರಣೆ            –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಸೋಮೇಶ್ವರ ಕೆರೆ ಅಂಗಳದಲ್ಲಿ ಯಂತ್ರಗಳ ಕಾರ್ಯಾಚರಣೆ –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಧಾರವಾಡ: ಕೆರೆಯನ್ನು ಸಂಪೂರ್ಣ ವಾಗಿ ವ್ಯಾಪಿಸಿದ್ದ ಅಂತರಗಂಗೆ ಗಿಡಗಳನ್ನು ತೆರವುಗೊಳಿಸುವ ಉದ್ದೇಶದಿಂದ ಕೆರೆಯ ಒಡ್ಡು ಒಡೆದು ಬಿರುಬೇಸಿಗೆಯಲ್ಲೂ ಉಳಿದಿದ್ದ ನೀರನ್ನು ಖಾಲಿ ಮಾಡಲಾಗುತ್ತಿದೆ.

ಶಾಲ್ಮಲ ನದಿ ಉಗಮ ಸ್ಥಾನಕ್ಕೆ ಅತ್ಯಂತ ಸಮೀಪ ಇರುವ ಎರಡು ಪ್ರಮುಖ ಕೆರೆಗಳಲ್ಲಿ ನುಗ್ಗಿಕೆರೆಯಂತೆಯೇ ಸೋಮೇಶ್ವರ ಕೆರೆಯೂ ಕಣಿವೆಗಳ ನಡುವೆ ಇರುವ ಸುಂದರ ಕೆರೆ. ಸುತ್ತಲೂ ಗುಡ್ಡ, ನಡುವೆ 17 ಎಕರೆಯ ಈ ಕೆರೆಯನ್ನು ಅಂತರಗಂಗೆ ಸಂಪೂರ್ಣವಾಗಿ ವ್ಯಾಪಿಸಿದೆ. ಕೆರೆಯನ್ನು ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆಯು ಯೋಜನೆ ರೂಪಿಸಿದೆ.

ಮೊದಲ ಹಂತವಾಗಿ ₹88 ಲಕ್ಷ ವೆಚ್ಚದಲ್ಲಿ ಕೆರೆಯ ಏರಿಯನ್ನು ಭದ್ರಪಡಿಸುವುದು, 800 ಮೀಟರ್‌ ಉದ್ದದ ಕಾಂಕ್ರೀಟ್ ತಳಪಾಯ ಹಾಕಿ, ಅದರ ಮೇಲೆ ಕಲ್ಲಿನ ಪಿಚ್ಚಿಂಗ್ ಮಾಡಲು ಸಿದ್ಧತೆ ನಡೆದಿದೆ. ಮುಂದಿನ ಹಂತದಲ್ಲಿ ಉಳಿದ ಭಾಗಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ನಂತರದಲ್ಲಿ ಕೆರೆ ಏರಿ ಮೇಲೆ ವಾಯುವಿಹಾರಿಗಳಿಗೆ ಓಡಾಡಲು ಅನುಕೂಲವಾಗುವಂತೆ ಪೇವರ್ಸ್ ಹಾಕಿಸುವುದು ಈ ಯೋಜನೆಯ ಭಾಗ.

ADVERTISEMENT

ಆದರೆ ಈ ಹಂತದಲ್ಲೇ ಕೆರೆಯಲ್ಲಿ ಬೆಳೆದಿರುವ ಅಂತರಗಂಗೆ ನಿರ್ಮೂಲನೆಗೆ ಬೃಹತ್ ಕಾಂಕ್ರೀಟ್ ಒಡ್ಡನ್ನೇ ಒಡೆದು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದ ಅಲ್ಲಿರುವ ಜಲಚರಗಳು ನೀರಿರುವ ಸ್ಥಳ ಹುಡುಕಿಕೊಂಡು ಚಡಿಪಡಿಸುತ್ತಾ ಹೋಗುವ ದೃಶ್ಯ ಸಾಮಾನ್ಯವಾಗಿದೆ. ಜೀವ ಉಳಿಸಿಕೊಳ್ಳಲು ಹಾವು, ಮೀನುಗಳು ಸುರಕ್ಷಿತ ಜಾಗವನ್ನು ಹುಡುಕುತ್ತಿವೆ. ಈ ಅವಕಾಶವನ್ನು ಹಕ್ಕಿಗಳು ಬಳಸಿಕೊಂಡು, ಬೇಟೆ ಆಡುವ ದೃಶ್ಯ ಕೆರೆಯಲ್ಲಿ ಕಂಡುಬರುತ್ತಿದೆ.

‘ಕೆರೆ ನೀರು ಖಾಲಿ ಮಾಡದೇ ಅಂತರಗಂಗೆ ತೆಗೆಯುವುದು ಕಷ್ಟ. ಜತೆಗೆ, ಅತಿಯಾಗಿ ಮಳೆಯಾದಲ್ಲಿ ಕೆರೆ ಒಡೆಯದಂತೆ ನೀರನ್ನು ಹಂತಹಂತವಾಗಿ ಖಾಲಿ ಮಾಡಲು ಸುಸಜ್ಜಿತ ದ್ವಾರವನ್ನು ನಿರ್ಮಿಸುವ ಉದ್ದೇಶದಿಂದ ಸ್ವಲ್ಪ ನೀರು ಖಾಲಿ ಮಾಡಬೇಕಾಗಿದೆ. 9 ತಿಂಗಳ ಈ ಕಾಮಗಾರಿ ಮುಗಿಯುವದರ ಒಳಗಾಗಿ ಅದನ್ನು ಸರಿಪಡಿಸಲಾಗುವುದು’ ಎಂದು ಗುತ್ತಿಗೆದಾರ ಅನ್ವರ್ ತಿಳಿಸಿದರು.

ಆದರೆ ಇಷ್ಟೆಲ್ಲಾ ಖರ್ಚು ಮಾಡುತ್ತಿರುವ ಇಲಾಖೆಯು, ಕೆರೆಯ ಒಡಲನ್ನು ಸೇರುತ್ತಿರುವ ಸುತ್ತಮುತ್ತಲಿನ ಮಲಿನ ನೀರಿನ ಶುದ್ಧೀಕರಣಕ್ಕೆ ಕ್ರಮ ಕೈಗೊಂಡಿಲ್ಲ. ಕೆರೆಯ ಸುತ್ತಲೂ ಅಳವಡಿಸಿರುವ ತೂಬುಗಳ ಮೂಲಕ ತ್ಯಾಜ್ಯ ನೀರು ಕೆರೆ ಒಡಲನ್ನು ಸೇರುತ್ತಲೇ ಇದೆ. ಕೆರೆಯಲ್ಲಿ ಅಂತರಗಂಗೆ ಬೆಳೆ ಯಲು ಸಹಕಾರಿಯಾಗುವ ಜತೆಗೆ, ಜೀವರಾಶಿಯ ಅಸ್ತಿತ್ವಕ್ಕೂ ತೊಂದರೆಯ ನ್ನುಂಟು ಮಾಡುತ್ತಿದೆ ಎಂದು ಪರಿಸರ ವಾದಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

‘ಸೋಮೇಶ್ವರ ಕೆರೆಯ ಪಕ್ಕದಲ್ಲೇ ಇರುವ ಗುಡ್ಡದ ಜಾಗದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ವಸತಿ ಸಮುಚ್ಚಯ ನಿರ್ಮಾಣಕ್ಕೆ ಜಾಗ ಸಿದ್ಧಪಡಿಸಲಾಗುತ್ತಿದೆ. ಅದು ಆದಲ್ಲಿ, ಅಲ್ಲಿನ ಮನೆಗಳ ನೀರೂ ಕೆರೆಗೆ ಸೇರುವ ಅಪಾಯವಿದೆ. ಸೂಕ್ತ ಪರಿಹಾರವಿಲ್ಲದಿದ್ದರೆ ಕೆರೆಯನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ. ನೀರು ಖಾಲಿ ಮಾಡಿದರೆ ತುಂಬಿಸುವುದಾದರೂ ಹೇಗೆ’ ಎಂದು ಪರಿಸರವಾದಿ ಶಂಕರ ಕುಂಬಿ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.