ನವಲಗುಂದ: ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾನತೆಯ ಚರ್ಚೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಮಾನತೆ ಹಾದಿಯ ಪಯಣ ಕುರಿತು ಪ್ರೊಜೆಕ್ಟರ್ ಮೂಲಕ ಸಮಾಜದ ಬದಲಾವಣೆ ಹಾಗೂ ಸಮಾನತೆ ಕುರಿತು ಹಲವು ಮಾಹಿತಿ ನೀಡಿದ ಅವರು, ‘ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಭವಿಷ್ಯದ ಕರ್ನಾಟಕ ನಿರ್ಮಾಣ ಮಾಡಬೇಕು. ಉತ್ತಮ ಸಮಾಜ ನಿರ್ಮಾಣವಾಗಬೇಕು’ ಎಂದರು.
‘ನಮಗಾಗಿರುವ ಅನ್ಯಾಯ ಮುಂದಿನ ಪೀಳಿಗೆಗೆ ಆಗಬಾರದು ಎಂದು ಸಮಾನತೆಯ ಚರ್ಚೆ ನಡೆಸಲಾಗುತ್ತದೆ. ರಾಜ್ಯದಾದ್ಯಂತ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುತ್ತೇವೆ. ನಾವು ಎಷ್ಟೇ ಹೋರಾಟಗಳನ್ನು ಮಾಡಿದರು ಕೂಡ ಆಳುವ ವರ್ಗಗಳು ನಮ್ಮನ್ನು ಹಿಮ್ಮೆಟ್ಟಿಸುತ್ತಿವೆ. ಒಳ್ಳೆ ಕೆಲಸಗಳನ್ನು ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.
‘ಸಿನಿಮಾ ನನ್ನನ್ನು ಬೆಳೆಸಿದೆ. ಹಾಗೆಯೇ ಸಿನಿಮಾ ನನಗೆ ವೈಯಕ್ತಿಕ ಅನುಭವ ಕೊಟ್ಟಿದೆ. ಅದರಿಂದ ನಾವು ಬೆಳೆದಿದ್ದೇವೆ. ಆದರೆ, ಉತ್ತಮ ಸಮಾಜವನ್ನು ಕಟ್ಟಲು ಹೋರಾಟವೇ ಮುಖ್ಯ. ಸಮ ಸಮಾಜದ ನಿರ್ಮಾಣಕ್ಕೆ ಜನರ ಬೆಂಬಲ ಬೇಕು. ನಾವು ಬೆಳೆಯುವುದಲ್ಲದೆ ನಮ್ಮೊಡನೆ ಜನರು ಬದಲಾಗಬೇಕು. ಸಮ ಸಮಾಜ ನಿರ್ಮಾಣವಾಗಬೇಕು’ ಎಂದು ತಿಳಿಸಿದರು.
ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಮಹಿಳೆಯರು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.