ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚೇತನ ವಾಣಿಜ್ಯ ಬಿಸಿಎ ಮತ್ತು ಬಿಬಿಎ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವದ ಅಂಗವಾಗಿ ಜರುಗಿದ ರಸ ಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆ ಮತ್ತು ಉತ್ತಮ ಕನ್ನಡ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ, ‘ಇಂದಿನ ಕನ್ನಡ ಭಾಷಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಭಿಮಾನದ ಭಾಷೆಯಾಗಿ ಬೆಳೆಸಬೇಕು. ದೈನಿಂದನ ಆಡಳಿತ ಭಾಷೆಯಾಗಿ ಉಪಯೋಗಿಸುವುದರಿಂದ ಇಂದಿನ ಮಕ್ಕಳಲ್ಲಿ ಹೆಚ್ಚಿನ ಭಾಷಾಭಿಮಾನ ಬೆಳೆಸಬಹುದು’ ಎಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಎಸ್ ಕೌಜಲಗಿ, ಕನ್ನಡ ಭಾಷೆಯ ಸುವರ್ಣ ಸಂಭ್ರಮ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಎಂ ಕೊರವಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಉತ್ತರ ಕರ್ನಾಟಕ ಭಾಗದ ಕನ್ನಡ ಭಾಷಾ ಶಿಕ್ಷಕರಿಗೆ ಅವರ ಸೇವೆ ಗುರುತಿಸಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಉತ್ತಮ ಕನ್ನಡ ಭಾಷಾ ಶಿಕ್ಷಕರು ಎಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. 50ಕ್ಕೂ ಹೆಚ್ಚು ವಿವಿಧ ಶಾಲೆಯ ಲಿಖಿತ ರಸ ಪ್ರಶ್ನೆ ಕಾರ್ಯಕ್ರಮ ದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಪ್ರಾಚಾರ್ಯರಾದ ಅಶೋಕ್ ವಡಕಣ್ಣವರ್, ಪಿಯು ವಿಭಾಗದ ಮುಖ್ಯಸ್ಥರಾದ ಪ್ರೊ.ನಿಧಿ ದೇಶಪಾಂಡೆ, ಬಿಕಾಂ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಗಾಮನಗಟ್ಟಿ, ಬಿಸಿಎ ವಿಭಾಗದ ಮುಖ್ಯಸ್ಥರಾದ ಶಿಲ್ಪಾ ಎಸ್ ಕುಲಕರ್ಣಿ, ಪ್ರೊ.ಭಾರತಿ ಬಡಿಗೇರ್, ಪ್ರೊ.ಶ್ವೇತಾ ಸಜ್ಜನ್, ಪ್ರೊ.ವೀಣಾ, ಪ್ರೊ.ಸಹನಾ ಉಪಸ್ಥಿತರಿದ್ದರು. ಪ್ರೊ.ಭಾಗ್ಯಶ್ರೀ ಬಳಿಗಾರ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.