ADVERTISEMENT

ಬಸವಣ್ಣನವರ ಕುರಿತು ಅವಹೇಳನ: ಶಾಸಕ ಯತ್ನಾಳ್ ಕ್ಷಮೆಗೆ ಲಿಂಗಾಯತ ಮಹಾಸಭಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 8:10 IST
Last Updated 3 ಡಿಸೆಂಬರ್ 2024, 8:10 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರಶೆಟ್ಟರ ಮಾತನಾಡಿದರು</p></div>

ಸುದ್ದಿಗೋಷ್ಠಿಯಲ್ಲಿ ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರಶೆಟ್ಟರ ಮಾತನಾಡಿದರು

   

ಹುಬ್ಬಳ್ಳಿ: 'ಬಸವಣ್ಣನವರು ಕೈಲಾಗದವರಂತೆ, ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆಯೇ ಸಮಾಜದವರೆಲ್ಲ ಹೊಳೆಗೆ ಹಾರಿ' ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಅಕ್ಷಮ್ಯ' ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.

ಲಿಂಗಾಯತ ಸಮುದಾಯದ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಶಾಸಕ ಯತ್ನಾಳ ಬೇಷರತ್ ಕ್ಷಮೆಯಾಚಿಸಬೇಕು' ಎಂದು ಅಗ್ರಹಿಸಿದರು.

ADVERTISEMENT

'ಸಮುದಾಯದ ಮಹಾಪುರುಷ, ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣರ ಬಗ್ಗೆ ಯತ್ನಾಳ್ ಅವರು ಕೀಳುಮಟ್ಟದಲ್ಲಿ ಮಾತನಾಡಿದ್ದು ಸರಿಯಲ್ಲ. ಇದು ಅವರ ಸಂಸ್ಕಾರದ ದ್ಯೋತಕವಾಗಿದೆ. ಅವರ ಹೇಳಿಕೆಗೆ ಯಾವ ಆಧಾರವಿದೆ? ಬಸವಣ್ಣರ ಬದುಕು, ಸಾಮಾಜಿಕ ಕಳಕಳಿ ಹೇಗಿತ್ತು ಎನ್ನುವುದು ಅವರ ಸಮಕಾಲೀನ ಶರಣರ ವಚನಗಳು ಸಾಕ್ಷಿಯಾಗಿವೆ. ತಕ್ಷಣ ಯತ್ನಾಳ್‌ ಅವರು ಕ್ಷಮೆ ಕೇಳಬೇಕು. ಕೇಳದಿದ್ದರೆ ಸರ್ಕಾರ ಮತ್ತು ಅವರ ಪಕ್ಷದ ವರಿಷ್ಠರು ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕು' ಎಂದು ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರಶೆಟ್ಟರ ಒತ್ತಾಯಿಸಿದರು.

'ಯತ್ನಾಳ್ ಅವರು ಕ್ಷಮೆ ಕೇಳದಿದ್ದರೆ ಲಿಂಗಾಯತ ನಾಯಕರಲ್ಲ ಎಂದು ಬಿಂಬಿಸಿ, ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು' ಎಂದು ಎಚ್ಚರಿಸಿದರು‌.

ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಂ‌.ವಿ. ಗೊ‌ಂಗಡಶೆಟ್ಟಿ ಮಾತನಾಡಿ, 'ಬಸವಾದಿ ಶರಣರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಲಿ‌ಂಗಾಯತ ಸಮುದಾಯದಷ್ಟೇ ಕ್ಷಮೆಯಲ್ಲ, ಸಮಸ್ತ ನಾಡಿನ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು, ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಲಾಗುವುದು' ಎಂದು ಹೇಳಿದರು.

ಸಮುದಾಯದ ಮುಖಂಡರಾದ ಜಿ‌.ಬಿ. ಹಳ್ಯಾಳ, ಎಸ್.ವಿ. ಜೋಡಳ್ಳಿ, ಪ್ರಭಣ್ಣ ಅಂಗಡಿ, ಎಸ್.ವಿ. ಕೊಟಗಿ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.