ಹುಬ್ಬಳ್ಳಿ: ಹುಬ್ಬಳ್ಳಿ ನಗರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ಕೆ.ಎಸ್.ಕೌಜಲಗಿ ಅವರದ್ದು ಶಿಕ್ಷಣ ಮತ್ತ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಮ್ಮೇಳನ ಅಧ್ಯಕ್ಷರಾಗಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
* ಹುಬ್ಬಳ್ಳಿ–ಧಾರವಾಡದಲ್ಲಿ ಸಾಹಿತ್ಯ ಕ್ಷೇತ್ರದ ಸ್ಥಿತಿಗತಿ...
ಕೆ.ಎಸ್.ಕೌಜಲಗಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಅಷ್ಟೇ ಅಲ್ಲ, ಎರಡೂ ತಾಲ್ಲೂಕುಗಳಲ್ಲೂ ಸಾಹಿತಿಗಳಿಗೆ ಕೊರತೆ ಇಲ್ಲ. ಆದರೆ, ಅವರಿಗೆ ಬರೆಯಲು ಮತ್ತು ಬೆಳಕಿಗೆ ಬರಲು ಪ್ರೋತ್ಸಾಹ ಸಿಗಬೇಕು. ಸಾಹಿತ್ಯ ಎಂಬುದು ನಿಂತ ನೀರಾಗದೇ, ಸದಾ ಹರಿಯುತ್ತಿರಬೇಕು. ಆಗ ಹಳೆ ನೀರಿನ ಜೊತೆ ಹೊಸ ನೀರು ಕೂಡ ಬೆಸೆದು ಸಾಹಿತ್ಯ ಕ್ಷೇತ್ರ ವಿಸ್ತಾರಗೊಳ್ಳುತ್ತದೆ. ಹೊಸ ಬರಹಗಾರರು ಇದ್ದಾರೆ. ಅವರನ್ನು ಮುಂಚೂಣಿಗೆ ತರುವ ಕೆಲಸಗಳು ಆಗಬೇಕು.
* ಸಾಹಿತ್ಯ–ಸಾಂಸ್ಕೃತಿಕ ಚಟುವಟಿಕೆಯತ್ತ ಯುವಜನರ ಆಸಕ್ತಿ...
ಮೊಬೈಲ್, ಇಂಟರ್‌ನೆಟ್, ಟಿವಿ, ಸಿನಿಮಾಗಳ ದಟ್ಟ ಪ್ರಭಾವದ ಮಧ್ಯೆಯೂ ಯುವಜನರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಪಠ್ಯಪುಸ್ತಗಳಿಗೆ ಮಾತ್ರವೇ ಸೀಮಿತಗೊಳ್ಳದೇ ವೈಚಾರಿಕ ಕೃತಿಗಳನ್ನು, ಕವನಗಳನ್ನು ಓದಬೇಕು. ಸಾಹಿತಿಗಳ ಬರಹಗಳನ್ನು ಅಧ್ಯಯನ ಮಾಡಿದರೆ, ಉತ್ತಮ ಬದುಕು ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಪೋಷಕರು, ಕಾಲೇಜಿನಲ್ಲಿ ಪ್ರಾಧ್ಯಾಪಕರು ಪ್ರಮುಖ ಪಾತ್ರ ವಹಿಸಬೇಕು.
* ಗಟ್ಟಿ, ಗಾಂಭೀರ್ಯದಿಂದ ಸಾಹಿತ್ಯ ಕಡಿಮೆ ಆಗುತ್ತಿದೆ...
ಏಕಾಗ್ರತೆ ಮತ್ತು ಸಮಚಿತ್ತದಿಂದ ತೊಡಗಿಸಿಕೊಂಡರೆ, ಸಹಜವಾಗಿಯೇ ಉತ್ತಮ ಸಾಹಿತ್ಯ ರಚನೆ ಆಗುತ್ತದೆ. ಸಾಹಿತ್ಯ ರಚನೆಗೆ ವೈಚಾರಿಕ ಓದು ಮತ್ತು ನಿರಂತರ ಅಧ್ಯಯನ ಇರಬೇಕು. ಪ್ರಚಲಿತ ವಿದ್ಯಮಾನ ಗೊತ್ತಿರಬೇಕು ಮತ್ತು ಜನಜೀವನದಲ್ಲಿ ಆಗುತ್ತಿರುವ ಏರುಪೇರುಗಳನ್ನು ಗಮನಿಸುತ್ತಿರಬೇಕು. ಕಥೆ, ಕವನ, ಕಾದಂಬರಿ, ಪ್ರಬಂಧ ಹೀಗೆ ಯಾವುದಾದರೂ ಒಂದು ಪ್ರಕಾರದಲ್ಲಿ ಪರಿಣತಿ ಸಾಧಿಸಿದ ಬಳಿಕ ವೈವಿಧ್ಯಮಯ ಸಾಹಿತ್ಯದತ್ತ ಮುಖ ಮಾಡಬೇಕು.
* ಬದುಕಿನ ಮೇಲೆ ಪುಸ್ತಕಗಳ ಪ್ರಭಾವ...
ಮೊಬೈಲ್‌ಗಳಲ್ಲಿ ರೀಲ್ಸ್, ವಿಡಿಯೊಗಳನ್ನು ತುಂಬಾ ನೋಡುತ್ತೇವೆ. ಆದರೆ, ದಿನಗಳು ಕಳೆದಂತೆ ಮರೆಯುತ್ತವೆ. ದೀರ್ಘ ಕಾಲ ನೆನಪಿರುವುದಿಲ್ಲ. ಆದರೆ, ಪುಸ್ತಕಗಳನ್ನು ಓದಿದರೆ ಅದರ ಸಂದೇಶ ಮತ್ತು ಅದರೊಳಗಿನ ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ಸಾಹಿತ್ಯ ಅಧ್ಯಯನವು ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಪಠ್ಯಪುಸ್ತಕಗಳಿಂದ ಶೈಕ್ಷಣಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಇತರ ಪುಸ್ತಕಗಳ ಅಧ್ಯಯನದಿಂದ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.
ವಿದ್ಯಾರ್ಥಿಗಳಿಗೆ ಮಾರ್ಗಗದರ್ಶಿ
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಕೊಳದೂರ ಗ್ರಾಮದಲ್ಲಿ 1948ರ ಜೂನ್ 15ರಂದು ಜನಿಸಿದ ಕೆ.ಎಸ್.ಕೌಜಲಗಿ ಅವರು ಪದವಿ ಶಿಕ್ಷಣವನ್ನು ಬೆಳಗಾವಿಯಲ್ಲಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಹುಬ್ಬಳ್ಳಿ ಗದಗ ಹಾವೇರಿಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಎಸ್‌ಎಸ್‌ಎಸ್ ಶಿಬಿರ ಅಧಿಕಾರಿಯಾಗಿ ಅಲ್ಲದೇ ಬೇರೆ ಬೇರೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಾಧನೆ ಮಾಡಲು ಪ್ರೋತ್ಸಾಹಿಸಿದ್ದಾರೆ. ಹಲವು ಕೃತಿಗಳನ್ನು ರಚಿಸಿರುವ ಅವರು ಹಲವು ಪ್ರಶಸ್ತಿಗಳು ಪಾತ್ರರಾಗಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು ಸದ್ಯ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.