ADVERTISEMENT

ಪಂಚ ರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರದಿಂದ ₹1 ಸಾವಿರ ಕೋಟಿ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 16:33 IST
Last Updated 15 ಅಕ್ಟೋಬರ್ 2023, 16:33 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಲೋಕಸಭೆ ಚುನಾವಣೆ ಮತ್ತು ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಅನೈತಿಕ ಮಾರ್ಗಗಳಿಂದ ₹1 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

‘ರಾಜಸ್ಥಾನ ಸರ್ಕಾರ ಮಧ್ಯಪ್ರದೇಶಕ್ಕೆ ಮತ್ತು ಕರ್ನಾಟಕ ಸರ್ಕಾರ ತೆಲಂಗಾಣಕ್ಕೆ ಹಣ ಕೊಡುತ್ತಿದೆ’ ಎಂದು ಭಾನುವಾರ ಸುದ್ದಿಗಾರರಿಗೆ ಹೇಳಿದರು.

‘ಬೆಂಗಳೂರಿನಲ್ಲಿ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ವಸೂಲಿ ಮಾಡಿರುವ ಕಮಿಷನ್‌ ಹಣ ಐಟಿ ದಾಳಿಯಲ್ಲಿ ಸಿಕ್ಕಿದೆ. ಈ ಪ್ರಕರಣದ ಸಮಗ್ರ ತನಿಖೆಯನ್ನು ಇಡಿ, ಸಿಬಿಐ ನಡೆಸಬೇಕು. ಇದರಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿರುವ ಶಂಕೆ ಇದೆ’ ಎಂದರು.

ADVERTISEMENT

‘ಕಾಂಗ್ರೆಸ್ ಪಕ್ಷದ ಕರಾಳ ಮುಖ ನಾಲ್ಕೈದು ತಿಂಗಳಲ್ಲಿ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷ ನೈತಿಕ ಅಧಃಪತನಕ್ಕಿಳಿದಿದೆ. ಇದು ಕಮಿಷನ್‌ ಸರ್ಕಾರ. ಜನರ ಕಲ್ಯಾಣದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.

‘ವಿದ್ಯುತ್ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿಲ್ಲ. ಕೇಂದ್ರದಿಂದ ಗುಣಮಟ್ಟದ ಕಲ್ಲಿದ್ದಲು ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಭರವಸೆ ನೀಡಿದ್ದಕ್ಕಿಂತ ಹೆಚ್ಚು ಪೂರೈಕೆ ಮಾಡಲಾಗುತ್ತಿದ್ದು, ಕಳೆದ ಏಳು ದಿನಗಳಲ್ಲಿ ಪ್ರತಿ ದಿನ 39 ಸಾವಿರ ಟನ್‌ ಪೂರೈಕೆ ಮಾಡಲಾಗಿದೆ.  ರಾಜ್ಯ ಸರ್ಕಾರ ಕಲ್ಲಿದ್ದಲು  ಸಚಿವಾಲಯಕ್ಕೆ ₹683 ಕೋಟಿ ಬಾಕಿ ಉಳಿಸಿಕೊಂಡಿದೆ. ನಾವು ಒಪ್ಪಂದದ ಪ್ರಕಾರ 2,698 ಲಕ್ಷ ಟನ್‌ ಪೂರೈಸಬೇಕು. ಆದರೆ, 3,153 ಲಕ್ಷ ಟನ್‌ ಪೂರೈಕೆ ಮಾಡುತ್ತಿದ್ದೇವೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಿಂದೂಗಳಿಗೆ ಭಯ ಇದೆ ಎಂದು ಹೇಳಿದ್ದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದು ಖಂಡನೀಯ. ಕೂಡಲೇ ಅದನ್ನು ಹಿಂಪಡೆಯಬೇಕು. ತಾಕತ್ತಿದ್ದರೆ ಭಗವಾನ್ ಅವರನ್ನು ಬಂಧಿಸಲಿ ನೋಡೋಣ. ಇದು ಹಿಂದೂ ವಿರೋಧಿ ಸರ್ಕಾರ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.