
ಹುಬ್ಬಳ್ಳಿ: ‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲಿ. ಆಗ ನಾವು ಯೋಜನೆ ಅನುಷ್ಠಾನ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಂಟೂರು ರಸ್ತೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿಯವರ ವಿಶೇಷ ಅನುದಾದಡಿ ವಸತಿ ಇಲಾಖೆ ಹಾಗೂ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿದ ಮನೆಗಳು ಸೇರಿ ರಾಜ್ಯದ ವಿವಿಧೆಡೆ ನಿರ್ಮಿಸಲಾದ ಒಟ್ಟು 42,345 ಮನೆಗಳನ್ನು ಇಲ್ಲಿ ಶನಿವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
‘ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗಾಗಿ ಕೇಂದ್ರದವರು ₹5,300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಈವರೆಗೆ ಕೊಟ್ಟಿಲ್ಲ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರೇ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದೀರಿ ನೀವು ಏನು ಮಾಡಿದ್ದೀರಿ ಎಂಬುದನ್ನು ಜನರ ಬಳಿ ಇಡಬೇಕು’ ಎಂದು ಅವರು ಆಗ್ರಹಿಸಿದರು.
ಭಾಷಣದ ಮುಂದುವರೆಸುತ್ತ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಅವರತ್ತ ನೋಡಿದ ಮುಖ್ಯಮಂತ್ರಿಯವರು, ‘ಧಾರವಾಡ, ನವಲಗುಂದ ವ್ಯಾಪ್ತಿಯ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಪ್ರವಾಹ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ₹360 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’ ಎಂದರು. ಆಗ ಕೋನರೆಡ್ಡಿಯವರು ಎದ್ದು ನಿಂತು ಕೃತಜ್ಞತೆ ಸಲ್ಲಿಸಿದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್, ‘ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಅವರದು ಯಾವ ಸಾಧನೆಯೂ ಇಲ್ಲ. ಬಿಜೆಪಿ ಸರ್ಕಾರವು ಧರ್ಮದ ಹೆಸರಿನಲ್ಲಿ ಕಲಹ ಮಾಡಿಸುವುದು ಹೊರತುಪಡಿಸಿದರೆ, ಮತ್ತೇನೂ ಮಾಡುವುದಿಲ್ಲ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ನಮ್ಮ ಸರ್ಕಾರವು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಬಡವರ ಹಣವನ್ನು ಬಡವರಿಗೆ ಕೊಡುತ್ತಿದೆ’ ಎಂದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ‘ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಬಿಜೆಪಿಯವರಿಗೆ ಒಂದೂ ಮನೆಯನ್ನೂ ನಿರ್ಮಿಸಿ ಬಡವರಿಗೆ ಕೊಡಲಾಗಲಿಲ್ಲ’ ಎಂದು ಟೀಕಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಸ್ವಾಗತಿಸಿದರು.
ಸ್ವಂತದ್ದೊಂದು ಮನೆ ಇರಬೇಕು ಎಂಬುದು ಅನೇಕ ವರ್ಷಗಳಿಂದ ಕನಸಾಗಿತ್ತು. ಕೂಲಿ ಕೆಲಸ ಮಾಡುವ ನಾನು ಕನಸು ಈಡೇರಲ್ಲ ಎಂದು ಭಾವಿಸಿದ್ದೆ. ಇದೀಗ ಮನೆಯ ಕೀಲಿ ಪಡೆದು ನನ್ನ ಮನೆಗೆ ಬಂದಿದ್ದೇನೆ.ದ್ಯಾಮವ್ವ, ದೇವರಮನಿ ಫಲಾನುಭವಿ
ಸಮಾವೇಶಕ್ಕೆ ಭಾರಿ ಜನ:
ಖರ್ಗೆ ಶ್ಲಾಘನೆ ‘ಹುಬ್ಬಳ್ಳಿಗೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ. ಸಮಾವೇಶಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇಷ್ಟು ಭಾರಿ ಪ್ರಮಾಣದಲ್ಲಿ ಜನರು ಸೇರಿರುವುದು ನೋಡಿದ್ದು ಇದೇ ಮೊದಲು. ನಿಮ್ಮೆಲ್ಲರನ್ನೂ ನೋಡಿ ತುಂಬಾ ಖುಷಿಯಾಯಿತು’ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು ‘ಕಾಂಗ್ರೆಸ್ ಸರ್ಕಾರ ಇರುವ ಕಡೆ ಮಾತ್ರವೇ ಕಲ್ಯಾಣ ಕಾರ್ಯಕ್ರಮಗಳು ಆಗುತ್ತವೆ. ಬಿಜೆಪಿ ಸರ್ಕಾರದಿಂದ ಇಂಥ ಉತ್ತಮ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಆಗದು. ದೇಶಕ್ಕೆ ಕಾಂಗ್ರೆಸ್ ನೀಡಿದಷ್ಟು ಕೊಡುಗೆ ಬಿಜೆಪಿ ನೀಡಿಲ್ಲ’ ಎಂದರು. ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ ಜಿಲ್ಲೆ ಸೇರಿ ಸುತ್ತಮುತ್ತಲೂ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಗೆ ಬರುತ್ತಿದ್ದಂತೆ ಜನರು ಹರ್ಷೋದ್ಗಾರ ವ್ಯಕ್ತಪಡಿಸಿದರು. 5 ಲಕ್ಷ ನೀರಿನ ಬಾಟಲ್: ವಿವಿಧೆಡೆಯಿಂದ ಬಂದ ಸಾರ್ವಜನಿಕರಿಗೆ ಮಧ್ಯಾಹ್ನದ ಊಟಕ್ಕೆ ಪುಲಾವ್ ಮೈಸೂರು ಪಾಕ್ ಹಾಗೂ ಚಟ್ನಿ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಪಕ್ಕದಲ್ಲೇ 147 ಊಟದ ಕೌಂಟರ್ ತೆರೆಯಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬೃಹತ್ ಪೆಂಡಾಲ್ ಮಧ್ಯ 25 ಎಲ್‌ಇಡಿ ಪರದೆಗಳಿದ್ದವು. ಬಿಗಿ ಭದ್ರತೆ: ಹುಬ್ಬಳ್ಳಿ ಧಾರವಾಡ ಮಹಾನಗರ ಧಾರವಾಡ ಜಿಲ್ಲಾ ಪೊಲೀಸ್ ಸೇರಿದಂತೆ ಚಿತ್ರದುರ್ಗ ದಾವಣಗೆರೆ ಘಟಪ್ರಭಾ ಗೋಕಾಕ್ ಸಂಕೇಶ್ವರ ಖಾನಾಪುರ ಕಲಬುರಗಿ ನಿಪ್ಪಾಣಿ ರಾಣಿಬೆನ್ನೂರ ಭಾಗಗಳಿಂದಲೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ವೇದಿಕೆ ಸುತ್ತಮುತ್ತ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಹಕ್ಕುಪತ್ರ ಸ್ವೀಕರಿಸಿದ ಫಲಾನುಭವಿಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಹತ್ತು ಪಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಿಸಿದರು. ಪಡದಯ್ಯನ ಹಕ್ಕಲದ ತುಳಸಿ ಬಸವರಾಜ ಎಳುಗುಡ್ಡ ರಮೇಶ ಹನಮಂತಪ್ಪ ಬಳ್ಳಾರಿ ಪವನ ಪರಶುರಾಮ ಮುಂಡರಗಿ ಸಾಗರ ಬಸಪ್ಪ ದುಂಡಿ ದ್ಯಾಮವ್ವ ಸುಬ್ಬಣ್ಣ ದೇವರಮನಿ ಸೀತಾ ರವಿ ದೊಡ್ಡಮನಿ ಲಕ್ಷ್ಮಿಬಾಯಿ ಪರಶುರಾಮ ಹನುಮನಹಳ್ಳಿ ಅಖ್ತರಬೇಗಂ ಸರಖಾಜಿ ಜಾಕೀರಹುಸೇನ ದಾಸ್ತಿಕೊಪ್ಪ ಹಾಗೂ ಉಸ್ಮಾನಗನಿ ನದಾಫ್. ಕಾದು ಕುಳಿತ ಸಭಾಪತಿ ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ವೇದಿಕೆ ಕಾರ್ಯಕ್ರಮ ಮೂರುವರೆ ತಾಸು ವಿಳಂಬವಾಗಿ ಆರಂಭವಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು 12 ಗಂಟೆಗೆ ಬಂದು ಆಸೀನರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಮನೆಗಳಿಗೆ ಭೇಟಿ ನೀಡಿ ವೇದಿಕೆಗೆ ಬರುವಷ್ಟರಲ್ಲಿ ಮಧ್ಯಾಹ್ನ 2.20 ಆಗಿತ್ತು. ಮಿಮಿಕ್ರಿ ಹಾಸ್ಯಚಟಾಕಿ ಮುಖ್ಯಮಂತ್ರಿ ಹಾಗೂ ಇತರ ಗಣ್ಯರನ್ನು ಮಹಿಳೆಯರು ಪೂರ್ಣಕುಂಭದಿಂದ ಸ್ವಾಗತಿಸಿದರು. ವಿವಿಧ ವಾದ್ಯ ಮೇಳ ಡೊಳ್ಳು ಕುಣಿತದ ಸಂಭ್ರಮ ಮೆರಗು ನೀಡಿತ್ತು. ಕಲಾವಿದರಾದ ಮಿಮಿಕ್ರಿ ಗೋಪಿ ಮತ್ತು ಜೂನಿಯರ್ ರಾಜಕುಮಾರ್ ಅವರು ಮಿಮಿಕ್ರಿ ಹಾಸ್ಯ ಚಟಾಕಿ ಮತ್ತು ಸಂಗೀತ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದರು. ನಾಗಚಂದ್ರಿಕಾ ಹಾಗೂ ತಂಡದವರು ಭಾವಗೀತೆ ಪ್ರಸ್ತುತ ಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.