ADVERTISEMENT

ಗಾಂಧಿ ಚಿಂತನೆಯನ್ನು ಸಾಕಾರಗೊಳಿಸುತ್ತಿರುವ ಮೋದಿ ಆಡಳಿತ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 8:10 IST
Last Updated 2 ಅಕ್ಟೋಬರ್ 2021, 8:10 IST
ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಹುಬ್ಬಳ್ಳಿಯ ಕಿಮ್ಸ್ ಬಳಿ ಇರುವ ಗಾಂಧೀಜಿ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದರು. ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಇದ್ದಾರೆ
ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಹುಬ್ಬಳ್ಳಿಯ ಕಿಮ್ಸ್ ಬಳಿ ಇರುವ ಗಾಂಧೀಜಿ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದರು. ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಇದ್ದಾರೆ   

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿ ಅವರ ಚಿಂತನೆಯನ್ನು ಸಾಕಾರಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ವೋಕಲ್ ಫಾರ್ ಲೋಕಲ್’ ಎನ್ನುವ ಮೂಲಕ, ಗಾಂಧೀಜಿ ಸ್ವದೇಶಿ ಚಿಂತನೆಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದಾರೆ. ಸ್ಥಳೀಯವಾಗಿಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಿದ್ದಾರೆ. ಆತ್ಮನಿರ್ಭರ ಭಾರತ ಕೂಡ ಗಾಂಧೀಜಿ ಅವರ ಕಲ್ಪನೆಗಳಲ್ಲಿ ಒಂದಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ, ನಗರದ ಕಿಮ್ಸ್ ಬಳಿ ಇರುವ ಗಾಂಧೀಜಿ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶವು ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದುಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಹೇಳುತ್ತಿದ್ದರು. ನಮ್ಮ ಸರ್ಕಾರ ಅವರ ಕನಸನ್ನು ನನಸು ಮಾಡುತ್ತಿದೆ’ ಎಂದರು.

ವ್ಯಕ್ತಿ ಬದಲು ಪಕ್ಷದ ನೇತೃತ್ವ

ADVERTISEMENT

‘ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಎಂದಿಗೂ ಟಿಕೆಟ್ ಹಂಚಿಕೆ ನಡೆಯುವುದಿಲ್ಲ. ಇದು ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಅಥವಾ ಮತ್ತೊಬ್ಬರ ವಿಷಯದಲ್ಲಷ್ಟೇ ಅಲ್ಲ. ಎಲ್ಲಾ ಕಡೆಯೂ ಪಕ್ಷದ ನೇತೃತ್ವದಲ್ಲೇ ಟಿಕೆಟ್ ಹಂಚಲಾಗುತ್ತದೆ. ಕೆಲ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೂ ಮುಂಚೆಯೇ ಘೋಷಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನದು ತುಷ್ಟೀಕರಣದ ರಾಜಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಮುಸ್ಲಿಮರನ್ನು ಒಲೈಸುವುದಕ್ಕಾಗಿಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದಾಗ, ಸಿದ್ದರಾಮಯ್ಯ ಹೇಗೆ ನಡೆದುಕೊಂಡರು ಎಂಬುದೇ ಇದಕ್ಕೆ ಸಾಕ್ಷಿ’ ಎಂದು ಸಿದ್ದರಾಮಯ್ಯ ಅವರ ಟೀಕೆಗೆ ತಿರುಗೇಟು ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.