ADVERTISEMENT

ನವಲಗುಂದ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:51 IST
Last Updated 22 ನವೆಂಬರ್ 2025, 4:51 IST
ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದಿಂದ ನವಲಗುಂದ ರೈತರು ರೈತಹುತಾತ್ಮ ಸ್ಮಾರಕರ ಬಳಿ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಶಿವಾನಂದ ಕರಿಗಾರ ಮಾತನಾಡಿದರು
ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದಿಂದ ನವಲಗುಂದ ರೈತರು ರೈತಹುತಾತ್ಮ ಸ್ಮಾರಕರ ಬಳಿ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಶಿವಾನಂದ ಕರಿಗಾರ ಮಾತನಾಡಿದರು   

ನವಲಗುಂದ: ತಾಲೂಕಿನಾದ್ಯಂತ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿಜೋಳದ ಬೆಳೆಯನ್ನು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಗೋವಿನಜೋಳದ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸೇನೆಯಿಂದ ರೈತರು ಶುಕ್ರವಾರ ಇಲ್ಲಿನ ರೈತ ಹುತಾತ್ಮ ಸ್ಮಾರಕದ ಎದುರಿಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಈ ವೇಳೆ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಅತೀವೃಷ್ಠಿಯಿಂದಾಗಿ ರೈತರ ಬೆಳೆಗಳು ಹಾಳಾಗಿವೆ. ಜತೆಗೆ ಎಕರೆಗೆ ₹35-40 ಸಾವಿರ ಖರ್ಚು ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದು ಫಸಲು ಕೊಯ್ಲಿಗೆ ಬಂದಾಗಿನಿಂದ ಮಾರುಕಟ್ಟೆಯಲ್ಲಿ ಕೇವಲ ₹1600 ಮಾತ್ರ ಇದ್ದುದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಈಗಾಗಲೇ ಸರ್ಕಾರ  ಬೆಂಬಲ ಬೆಲೆಯಡಿ ಹೆಸರು ಬೆಳೆ ಖರೀದಿ ಕೇಂದ್ರ ಆರಂಭಿಸಿದ್ದರೂ ಅಧಿಕಾರಿಳು ಗುಣಮಟ್ಟವಿಲ್ಲ ಎಂದು ಖರೀದಿ ಮಾಡಲು ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ರೈತರು ತೊಂದರೆ ಅನುಭವಿಸುತ್ತಿದ್ದು ಸರ್ತಾರವೇ ಹೆಸರನ್ನು ಖರೀಸಲು ಮುಂದಾಗಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ರೈತ ಮುಖಂಡರಾದ ಲೋಕನಾಥ ಹೆಬಸೂರ, ಶಿವಾನಂದ ಕರಿಗಾರ ಮಾತನಾಡಿ ಸೋಮವಾರದೊಳಗೆ ಗೋವಿನಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡದಿದ್ದಲ್ಲಿ ಕಬ್ಬು ಬೆಳೆಗಾರರು ನಡೆಸಿದ ಹೋರಾಟದ ಮಾದರಿಯನ್ನು ಅನುಸರಿಸಿ ಎತ್ತು, ಚಕ್ಕಡಿಗಳೊಂದಿಗೆ ಬೀದಿಗಿಳಿಯಬೇಕಾಗುವುದು ಎಂದರು.

ರಘುನಾಥ ನಡುವಿನಮನಿ, ನಿಂಗಪ್ಪ ಬಡಿಗೇರ, ವೆಂಕಪ್ಪ ಸಂಜೀವನರ, ಮುತ್ತುರಾಜ ಹೊಸಗೂರ, ಶೇಖಪ್ಪ ಬೆಳಹಾರ, ನಾಗರಾಜ ಹಡಪದ, ನಾಗಪ್ಪ ಬಡಕಲಿ, ಸಿದ್ದಲಿಂಗಪ್ಪ ಮಾಳಣ್ಣವರ, ಭರಮಪ್ಪ ಚಲವಾದಿ, ಅರುಣಕುಮಾರ ಪಟ್ಟಣಶೆಟ್ಟಿ, ಗುರುನಾಥ ನಾಯ್ಕರ, ಕೃಷ್ಣರಡ್ಡಿ ಕುರಹಟ್ಟಿ ಸೇರಿದಂತೆ ನೂರಾರು ರೈತರು ಆಮರಣ ಉಪವಾಸದಲ್ಲಿ ಪಾಲ್ಗೊಂಡಿದ್ದರು.

‘ನಫೇಡ್‌, ಕೆಎಂಎಫ್‌ಗೆ ಖರೀದಿಸಲು ಸೂಚನೆ’

ವಿಧಾನಸಭಾ ಕ್ಷೇತ್ರದಲ್ಲಿಯೇ ಅಂದಾಜು 1,36,000 ಅಧಿಕ ಟನ್ ಗೋವಿನಜೋಳ ಇದೆ. ರೈತರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೂ ಕೂಡಲೇ ನಫೇಡ್‌ ಹಾಗೂ ಕೆಎಂಎಫ್‌ ವತಿಯಿಂದ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಹೆಸರು ಕಾಳು ಖರೀದಿ ಕೇಂದ್ರ ಎಲ್ಲ ಕಡೆ ಪ್ರಾರಂಭಿಸಿದ್ದು ಈ ಸಲದ ಮಳೆಯಿಂದ ಬೆಳೆಯ ಗುಣಮಟ್ಟದಲ್ಲಿ  ಅಸ್ತವ್ಯಸ್ಥವಾಗಿದ್ದು ಖರೀದಿ ಕೇಂದ್ರದಲ್ಲಿ ಕೇವಲ ಎಫ್‌ಇಕ್ಯೂ ಮಾದರಿಯ ಹೆಸರು ಮಾತ್ರ ಖರೀದಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬದಲಾವಣೆ ಮಾಡಲು ನಿಯೋಗ ಕೊಂಡೊಯ್ಯಬೇಕೆಂದು ಸಿ.ಎಂ ಭೇಟಿ ಮಾಡಿ ಒತ್ತಾಯಿಸಿದ್ದೇನೆ. ಖರೀದಿ ಕೇಂದ್ರ ಪ್ರಾರಂಭಿಸಲು ಸಿ.ಎಂ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.