
ಧಾರವಾಡ: ಮಾವಿನ ಮರಗಳು ಸಮೃದ್ಧವಾಗಿ ಹೂಕಟ್ಟಿ ನಳನಳಿಸುತ್ತಿವೆ. ಬೆಳೆಗೆ ಪೂರಕ ವಾತಾವರಣ ಇದ್ದು, ಬೆಳೆಗಾರರು ಈ ಬಾರಿ ಅಧಿಕ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಮಾವು ಹೆಚ್ಚು ಬೆಳೆಯುವ ಜಿಲ್ಲೆಗಳಲ್ಲಿ ಧಾರವಾಡವೂ ಒಂದು. ಜಿಲ್ಲೆಯಲ್ಲಿ ಅಂದಾಜು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದೆ. ಅಲ್ಫಾನ್ಸೊ, ಕಲ್ಮಿ, ಕೇಸರ್, ರಸಪುರಿ, ಮಲ್ಲಿಕಾ, ಖಾದರ್ ಇತರ ತಳಿಗಳು ಇವೆ. ಈ ಪೈಕಿ ಶೇ 99ರಷ್ಟು ಅಲ್ಫಾನ್ಸೊ ತಳಿ ಇದೆ.
ಮರಗಳು ಸಮೃದ್ಧವಾಗಿ ಹೂಕಟ್ಟಿದ್ದು, ಪೂರಕ ವಾತಾವರಣದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ಬಾರಿ ಜಿಲ್ಲೆಯಲ್ಲಿ 65 ಸಾವಿರ ಮೆಟ್ರಿಕ್ ಟನ್ ಫಸಲು ಅಂದಾಜಿಸಿದೆ.
ಧಾರವಾಡ, ಕಲಘಟಗಿ,ಅಳ್ನಾವರ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಮಾವಿನ ತೋಟಗಳು ಹೆಚ್ಚು ಇವೆ. ಬೆಳೆಗಾರರು ಬೆಳೆ ರಕ್ಷಣೆ ನಿಟ್ಟಿನಲ್ಲಿ ಔಷಧ ಸಿಂಪಡಣೆ, ಗೊಬ್ಬರ ಪೂರೈಕೆಯಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಹೂವು ಬಿಡದ ಮರಗಳೂ ಈ ಬಾರಿ ಚಿಗುರೊಡೆದು, ಹೂವುಗಳು ಕಾಣಿಸಿಕೊಂಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಮಾವಿನ ಮರಗಳಲ್ಲಿ ಹೂವು ಹೆಚ್ಚು ಇದೆ.
‘ಬೆಳೆಗಾರರು ಹೂವು ರಕ್ಷಣೆಗೆ ಕ್ರಮ ವಹಿಸಬೇಕು. ಪರಾಗಸ್ಪರ್ಶ ಸಮಯದಲ್ಲಿ ಔಷಧ ಸಿಂಪಡಣೆ ಮಾಡಬಾರದು.ಬೆಳಿಗ್ಗೆ 10 ಗಂಟೆಯೊಳಗೆ ಅಥವಾ ಮಧ್ಯಾಹ್ನ 4 ಗಂಟೆ ನಂತರ ಸಿಂಪಡಣೆ ಮಾಡಬೇಕು. ಜಿಗಿ ಹುಳು ಬಾಧೆ ನಿಯಂತ್ರಣಕ್ಕೆ, ಮಂಜು ಬಿದ್ದರೆ ಶಿಲೀಂಧ್ರ ನಾಶಕ ಔಷಧ ಸಿಂಪಡಣೆ ಮಾಡಬೇಕು. ಹೂವು ಬಿಡುವ ಸಂದರ್ಭದಲ್ಲಿ ಬೆಳೆಗಳಿಗೆ ನೀರು ಹರಿಸಬಾರದು‘ ಕೃಷಿ ವಿ.ವಿ ತೋಟಗಾರಿಕೆ ವಿಭಾಗದ ಪ್ರೊ.ಎಸ್.ಎಂ.ಹಿರೇಮಠ ತಿಳಿಸಿದರು.
‘ಎರಡು ಎಕರೆಯಲ್ಲಿ ಮಾವು ಇದೆ. 75ಕ್ಕೂ ಹೆಚ್ಚು ಮಾವಿನ ಮರಗಳಿವೆ. ಕಳೆದ ವರ್ಷವೂ ಹೂವಿನ ಪ್ರಮಾಣ ಅಧಿಕವಾಗಿತ್ತು. ಅತಿಯಾದ ಇಬ್ಬನಿ, ಮೋಡ ಕವಿದ ವಾತಾವರಣದಿಂದಾಗಿ ಬೂದಿರೋಗ ತಗುಲಿ ನಿರೀಕ್ಷೆ ಕಮರಿತ್ತು. ಈ ವರ್ಷ ಭರಪೂರ ಹೂವು ಅರಳಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆ ಇದೆ’ ಎಂದು ಕೋಟೂರಿನ ಬೆಳೆಗಾರ ಮೌನೇಶ ದರಗಾದ ‘ಪ್ರಜಾವಾಣಿ’ಗೆ ತಿಳಿಸಿದರು.
ನವೆಂಬರ್ ಡಿಸೆಂಬರ್‌ನಲ್ಲಿ ಹೆಚ್ಚಿನ ಬಿಸಿಲುಚಳಿ ಇದ್ದಿದ್ದರಿಂದ ಮಾವಿನ ಮರಗಳು ಚೆನ್ನಾಗಿ ಹೂ ಕಟ್ಟಿವೆ. ಕಳೆದ ವರ್ಷ ಎಕರೆಗೆ ಒಂದು ಟನ್ ಇಳುವರಿ ಬಂದಿತ್ತು. ಈ ಬಾರಿ ಹೆಚ್ಚಿನ ಇಳುವರಿ ನಿರೀಕ್ಷೆ ಇದೆಪ್ರಮೋದ ಗಾಂವಕರ್ ಮಾವು ಬೆಳೆಗಾರ
ಈ ಬಾರಿ ಉತ್ತಮ ಮಳೆ ಹವೆಯಿಂದ ಶೇ 90ಕ್ಕೂ ಹೆಚ್ಚು ಮಾವಿನ ಮರಗಳು ಹೂವು ಕಟ್ಟಿವೆ. ಈವರೆಗೆ ಯಾವುದೇ ರೋಗಬಾಧೆ ಕಂಡುಬಂದಿಲ್ಲ. ವಾತಾವರಣ ಹೀಗೆಯೇ ಇದ್ದರೆ ಹೆಕ್ಟೇರ್‌ಗೆ 4 ರಿಂದ 5 ಟನ್ ಇಳುವರಿ ಲಭಿಸುವ ನಿರೀಕ್ಷೆ ಇದೆಕಾಶಿನಾಥ ಭದ್ರಣ್ಣವರ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.