ADVERTISEMENT

ಸಿಂಗಪುರಕ್ಕೆ ‘ಧಾರವಾಡದ ಆಪೂಸ್’: ಹೆಚ್ಚಿನ ಆದಾಯದ ನಿರೀಕ್ಷೆ

ಗೋವರ್ಧನ ಎಸ್‌.ಎನ್‌.
Published 17 ಮೇ 2025, 5:44 IST
Last Updated 17 ಮೇ 2025, 5:44 IST
ಧಾರವಾಡದಲ್ಲಿ ಮಾವು ಬೆಳೆಗಾರರ ಬಳಗದಿಂದ ಸಿಂಗಾಪುರಕ್ಕೆ ಮಾವು ರಫ್ತು ಮಾಡುವ ಕಾರ್ಯಕ್ರಮ ಈಚೆಗೆ ಜರುಗಿತು
ಧಾರವಾಡದಲ್ಲಿ ಮಾವು ಬೆಳೆಗಾರರ ಬಳಗದಿಂದ ಸಿಂಗಾಪುರಕ್ಕೆ ಮಾವು ರಫ್ತು ಮಾಡುವ ಕಾರ್ಯಕ್ರಮ ಈಚೆಗೆ ಜರುಗಿತು   

ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಕುಸಿದಿದ್ದರೂ, ಜಿಲ್ಲೆಯ ರೈತರು ಸಿಂಗಾಪುರಕ್ಕೆ ಪ್ರಾಯೋಗಿಕವಾಗಿ ಮಾವು ರಫ್ತು ಮಾಡಿ ಯಶಸ್ವಿಯಾಗಿದ್ದಾರೆ. ರಫ್ತು ಮುಂದುವರಿಸುವ ಸಕಾರಾತ್ಮಕ ಸ್ಪಂದನೆಯೂ ಸಿಂಗಾಪುರದಿಂದ ಸಿಕ್ಕಿದೆ.

ಮಾವು ಬೆಳೆಗಾರರ ಬಳಗದವರು ಬೆಳಗಾವಿಯ ಸ್ವಯಂಭು ರಫ್ತುದಾರ ಕಂಪನಿ ಮೂಲಕ 110 ಬಾಕ್ಸ್‌ಗಳನ್ನು (ಒಂದು ಡಜನ್‌ ಮಾವು ಇರುವ ಬಾಕ್ಸ್‌) ಈಚೆಗೆ ಸಿಂಗಾಪುರಕ್ಕೆ ರಫ್ತು ಮಾಡಿದ್ದರು. ಮಾವು ಸಿಂಗಾಪುರ ತಲುಪಿದ್ದು, ಧಾರವಾಡದ ವಿಶೇಷ ಆಪೋಸ್‌ ಮಾವಿನ ತಳಿಯ ಬಗ್ಗೆ ಅಲ್ಲಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

‘ಕೆಲವು ರೈತರು, ವ್ಯಾಪಾರಿಗಳು ಖಾಸಗಿಯಾಗಿ ಮಾವಿನ ಹಣ್ಣುಗಳನ್ನು ರಫ್ತು ಮಾಡುತ್ತಿದ್ದರು. ಇದೀಗ ಸಂಘಟನೆಯೊಂದರ ಮೂಲಕ ಹಣ್ಣುಗಳು ರಫ್ತಾಗಿರುವುದು ವಿಶೇಷ. ಇದರ ನೇರ ಲಾಭ ಬೆಳೆಗಾರರಿಗೆ ಸಿಗುತ್ತದೆ’ ಎನ್ನುತ್ತಾರೆ ಮಾವು ಬೆಳೆಗಾರ ಹಾಗೂ ವಾಲ್ಮಿ ಮಾಜಿ ನಿರ್ದೇಶಕ ರಾಜೇಂದ್ರ ಪೊದ್ದಾರ.

ADVERTISEMENT

‘ಮಾವು ರಫ್ತು ಮಾಡಲು ಮಾವು ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಇಲಾಖೆ, ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೆರವು ನೀಡಿದರು. ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ರಫ್ತು ಗುಣಮಟ್ಟ ಆಧರಿಸಿ ಹಣ್ಣುಗಳನ್ನು ಬೆಳೆದು, ರವಾನೆ ಮಾಡಲಾಗಿತ್ತು’ ಎಂದು ವಿವರಿಸಿದರು. 

ವಾಟ್ಸ್‌ಆ್ಯಪ್‌ನಿಂದ ಸಂಘಟನೆವರೆಗೆ: ‘ಜಿಲ್ಲೆಯ ರೈತರು ಸಾಂಪ್ರದಾಯಿಕವಾಗಿ ಮಾವು ಬೆಳೆಯುತ್ತಾರೆ. ಕೆಲವರಷ್ಟೇ ವೈಜ್ಞಾನಿಕವಾಗಿ ಬೆಳೆ ಬೆಳೆದು, ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಎಲ್ಲ ಬೆಳೆಗಾರರಿಗೆ ನೆರವಾಗಲು ವಾಟ್ಸ್‌ಆ್ಯಪ್‌ನಲ್ಲಿ ಮಾವು ಬೆಳೆಗಾರರ ಬಳಗ ರಚಿಸಲಾಯಿತು. 2024ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಣಿಯಾಗಿದೆ. ವಾಟ್ಸ್‌ಆ್ಯಪ್‌ ಗ್ರುಪ್‌ನಲ್ಲಿ 300 ಮಂದಿ ಬೆಳೆಗಾರರು ಸದಸ್ಯರಾಗಿದ್ದಾರೆ. ರಫ್ತು ಕಾರ್ಯಕ್ಕೆ 40 ಮಂದಿ ಬೆಳೆಗಾರರನ್ನು ಆಯ್ಕೆ ಮಾಡಿಕೊಂಡು, ತರಬೇತಿ ನೀಡಲಾಗಿತ್ತು’ ಎಂದರು.

‘ಉತ್ತಮ ಇಳುವರಿ ಸಿಗದೆ ಕೆಲವರು ಮಾವಿನ ಮರಗಳನ್ನೇ ಕಡಿಯುತ್ತಿದ್ದರು. ಅಂತಹವರಲ್ಲಿ ಭರವಸೆ ತುಂಬಿ, ವೈಜ್ಞಾನಿಕ ರೀತಿಯಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯ ಅರಿವು ಮೂಡಿಸಲಾಗುತ್ತಿದೆ. ಅಗತ್ಯ ಸಲಕರಣೆ ವಿತರಣೆಯೊಂದಿಗೆ ಕ್ಷೇತ್ರ ಅಧ್ಯಯನ, ತಜ್ಞರಿಂದ ತರಬೇತಿ, ಉಪನ್ಯಾಸ ಆಯೋಜಿಸಲಾಗುತ್ತಿದೆ. ಬೆಳೆಗಾರರಿಂದ ಬಳಕೆದಾರರವರೆಗೆ ಎಂಬ ತತ್ವದಡಿ ನೇರ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು. 

ಬೆಳೆಗಾರರೇ ಸಂಘಟನಾತ್ಮಕವಾಗಿ ರಫ್ತು ಮಾಡಿರುವುದು ಸಕಾರಾತ್ಮಕ ನಡೆ. ಪ್ರಮಾಣೀಕರಣ ಸೇರಿದಂತೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತಿದೆ
ಕಾಶಿನಾಥ ಭದ್ರಣ್ಣನವರ, ಉಪನಿರ್ದೇಶಕ ತೋಟಗಾರಿಕಾ ಇಲಾಖೆ
ಮಾವು ಬೆಳೆಗಾರರ ಬಳಗದ ಮೂಲಕ ಮಾವು ರಫ್ತು ಮಾಡಿದ್ದೇನೆ. ಇದೀಗ ಅಮೆರಿಕಕ್ಕೆ 3 ಟನ್‌ ಮಾವು ರಫ್ತು ಮಾಡಲು ತಯಾರಿ ನಡೆಸಿದ್ದೇನೆ
ಪ್ರಮೋದ್‌ ತುಕಾರಾಂ ಗಾಂವ್ಕರ್‌, ಮಾವು ಬೆಳೆಗಾರ ಕಲಕೇರಿ
‘ಪ್ಯಾಕಿಂಗ್‌ಹೌಸ್‌ ಅವಶ್ಯ’
‘2020ರಲ್ಲೇ ಮಾವು ರಫ್ತಿಗೆ ಯೋಜನೆ ರೂಪಿಸಲಾಗಿತ್ತು. ಈ ವರ್ಷ ಇಳುವರಿ ಕಡಿಮೆ ಆಗಿದ್ದರಿಂದ ಮುಂದೆ ದೊಡ್ಡ ಮಟ್ಟದಲ್ಲಿ ರಫ್ತು ಮಾಡುವ ಯೋಜನೆಯಿದೆ. ಸ್ಥಳೀಯ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ಸಿಗಲಿದೆ. ಹಾಗಾಗಿ ಹೆಚ್ಚಿನ ರೈತರು ಇದಕ್ಕೆ ಕೈಜೋಡಿಸಬೇಕು’ ಎಂದು ರಾಜೇಂದ್ರ ಪೊದ್ದಾರ ಕೋರಿದರು. ‘ಮಾವು ಅಭಿವೃದ್ಧಿ ಮಂಡಳಿ ಅಡಿ ಪ್ಯಾಕಿಂಗ್‌ಹೌಸ್‌ ಶೀಘ್ರ ನಿರ್ಮಾಣಗೊಂಡು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದರಿಂದ ಜಿಲ್ಲೆಯ ಆಪೋಸ ಮಾವಿಗೆ ಹೊಸ ಬ್ರ್ಯಾಂಡ್‌ ಸೃಷ್ಟಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.