ಧಾರವಾಡ: ಹಾಲು ಹಾಗೂ ವಿದ್ಯುತ್ ದರ ಏರಿಕೆ ಖಂಡಿಸಿ ಎಸ್‍ಯುಸಿಐ ಜಿಲ್ಲಾ ಸಮಿತಿಯವರು ಮಂಗಳವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ, ‘ರಾಜ್ಯದಲ್ಲಿ ಮತ್ತೆ ಹಾಲಿನ ದರ ಲೀಟರಿಗೆ ₹4 ಏರಿಕೆಯಾಗಿದೆ. ವಿದ್ಯುತ್ ದರವನ್ನು ಮತ್ತೆ ಏರಿಕೆ ಮಾಡಿರುವುದು ಖಂಡನೀಯ’ ಎಂದರು.
‘ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬುದು ನಿಜ. ಇದನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ಹೈನುಗಾರಿಕೆಯ ಒಳಸುರಿಗಳ ವೆಚ್ಚವನ್ನು ಸರ್ಕಾರ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.
‘ವಿದ್ಯುತ್ ದರ ಮತ್ತೆ ಪರಿಷ್ಕರಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯ ಕಾರಣಕ್ಕೆ ಇದರಿಂದ ಬಹುಪಾಲು ಗ್ರಾಹಕರಿಗೆ ಸಮಸ್ಯೆ ಆಗದೇ ಇರಬಹುದು. ಆದರೆ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ಹೊರೆಯಾಗಲಿದೆ. ಕೂಡಲೇ ಸರ್ಕಾರ ಹಾಲು, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ದೀಪಾ ಧಾರವಾಡ, ಭವಾನಿಶಂಕರ ಗೌಡರ್, ಶರಣು ಗೋನವಾರ, ಶಶಿಕಲಾ ಮೇಟಿ, ದೇವಮ್ಮ ದೇವತಕಲ್, ರಣಜಿತ್ ದೂಪದ್, ಪ್ರೀತಿ ಸಿಂಗಾಡಿ, ಸಿಂಧು ಕೌದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.