ADVERTISEMENT

ಭ್ರಷ್ಟರು, ಕೊಲೆಗಡುಕರಿಗೆ ರಕ್ಷಣೆ ಇಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 9:19 IST
Last Updated 7 ಸೆಪ್ಟೆಂಬರ್ 2019, 9:19 IST

ಹುಬ್ಬಳ್ಳಿ: ಕೊಲೆಗಡುಕರು, ಗೂಂಡಾಗಳು, ಭ್ರಷ್ಟಾಚಾರಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬೆಳಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗೌರಿ ಲಂಕೇಶ್, ಯೋಗೀಶ್‌ಗೌಡ ಸೇರಿ ಹಲವು ಕೊಲೆ ಪ್ರಕರಣಗಳ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿತ್ತು. ಆದರೆ, ಈ ಹಿಂದಿನ ಸರ್ಕಾರಗಳು ಗಮನ ಹರಿಸಿರಲಿಲ್ಲ. ಭ್ರಷ್ಟಾಚಾರಿಗಳು, ಕೊಲೆಗಡುಕರಿಗೆ ರಕ್ಷಣೆ ಸಿಗುತ್ತಿದೆ ಎಂಬ ಭಾವನೆ ದೇಶದಲ್ಲಿತ್ತು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟರು, ಕೊಲೆಗಡುಕರ ವಿರುದ್ಧ ತನಿಖೆ ಶುರುವಾಗಿದೆ. ತಪ್ಪಿತಸ್ಥರ ಶಿಕ್ಷೆ ಅನುಭವಿಸಲೇಬೇಕು ಎಂದರು.

ನಾಳೆಯಿಂದ ಸಮಾವೇಶ

ADVERTISEMENT

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೆ.8 ಮತ್ತು 9 ರಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜನರಿಗೆ ಸಿಗಬೇಕಾದ ಸವಲತ್ತು, ಇಲಾಖೆಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ಸೆ.8 ರಂದು ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬೆಳಿಗ್ಗೆ 10 ರಿಂದ ಸಂಜೆವರೆಗೆ ನಡೆಯಲಿದೆ. ಎರಡನೇ ದಿನ 30 ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ನೆರೆ ಪರಿಹಾರ ವಿತರಣೆ ಭರವಸೆ

ದೇಶದ 18 ರಾಜ್ಯದಲ್ಲಿ 100 ವರ್ಷದ ಬಳಿಕ ಜಲಪ್ರಳಯ ಸಂಭವಿಸಿದೆ. ಕೇಂದ್ರ ಸರ್ಕಾರ ಎಲ್ಲ ಕಡೆಗಳಿಗೂ ಸಮೀಕ್ಷೆ ನಡೆಸಲು ತಂಡಗಳನ್ನು ಕಳುಹಿಸಿದೆ. ರಾಜ್ಯಕ್ಕೂ ಇಬ್ಬರು ಕೇಂದ್ರ ಸಚಿವರು ಹಾಗೂ ತಂಡಗಳು ಬಂದು ಮಳೆ, ಪ್ರವಾಹದಿಂದ ಹಾನಿ ಪರಿಶೀಲಿಸಿದ್ದಾರೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಕರ್ನಾಟಕ ಸೇರಿ ಎಲ್ಲ ರಾಜ್ಯಗಳಿಗೆ ನೆರೆ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.‌

ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ತಾತ್ಕಾಲಿಕವಾಗಿ ಸಂತ್ರಸ್ತರಿಗೆ ಈಗಾಗಲೇ ₹10 ಸಾವಿರ ಪರಿಹಾರ ವಿತರಿಸಲಾಗಿದೆ. ಅದರಲ್ಲೂ ಭ್ರಷ್ಟಾಚಾರ ನಡೆಯಬಾರದೆಂಬ ಉದ್ದೇಶದಿಂದ ನೇರವಾಗಿ ಸಂತ್ರಸ್ತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಮನೆ ಹಾಗೂ ಬೆಳೆ ಹಾನಿಗೆ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಪ್ರತ್ಯೇಕ ಖಾತೆಗೆ ಹಣ ವರ್ಗಾವಣೆ ಮಾಡಿದ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.