
ಧಾರವಾಡ: ‘ಹಲವು ಬಾರಿ ಗಡುವು ನೀಡಿದರೂ ಜಿಲ್ಲೆಯಲ್ಲಿ ನೀರು ಪೂರೈಕೆ ಯೋಜನೆ ಕಾಮಗಾರಿ ಪೂರ್ಣಗೊಳಿಸದ ಎಲ್ ಅಂಡ್ ಟಿ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ‘ಹಲವು ಬಾರಿ ಸಭೆ ನಡೆಸಿ ಎಲ್ ಅಂಡ್ ಟಿ ಸಂಸ್ಥೆಯವರಿಗೆ ಪದೇಪದೇ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದರು.
‘25 ಗ್ರಾಮಗಳಿಗೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮುಗಿದಿದೆ. ವಿದ್ಯುತ್ ವ್ಯವಸ್ಥೆ ಕಲ್ಪಿಸಿದರೆ ನೀರು ಪೂರೈಸಬಹುದು. ತ್ವರಿತವಾಗಿ ಕಾಮಗಾರಿ ಮುಗಿಸಲಾಗುವುದು’ ಎಂದು ಎಲ್ ಅಂಡ್ ಟಿ ನೌಕರರೊಬ್ಬರು ತಿಳಿಸಿದರು.
‘ಕೆಲವೆಡೆ ಪೈಪ್ ಅಳವಡಿಸಲು ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ಇಂಥ ಕಡೆ ಡಾಂಬರು ಹಾಳಾಗಿದೆ. ಕೈ ಮುಗಿಯುತ್ತೇನೆ ಕಾಮಗಾರಿ ಮುಗಿಸಿ ನೀರು ಪೂರೈಸಿ’ ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.
‘ಜಿಲ್ಲೆಯಲ್ಲಿ ನಾಲ್ಕು ಗ್ರಾಮಗಳಿಗೆ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 467 ಆರ್.ಒ ಪ್ಲಾಂಟ್‌ಗಳಿವೆ, ಈ ಪೈಕಿ 373 ಕಾರ್ಯನಿರ್ವಹಿಸುತ್ತಿವೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ತಿಳಿಸಿದರು.
'ನಗರದಲ್ಲಿ ಕೆಲವು ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆಲದಿನಗಳಲ್ಲಿ ಮೂರು ದಿನಗಳಿಗೊಮ್ಮೆ ನೀರು ಒದಗಿಸಲಾಗುವುದು’ ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದರು.
‘ಕೆಐಎಡಿಬಿಯವರು 8 ಸಾವಿರ ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಎಸ್‌ಸಿ, ಎಸ್‌ಟಿ ಉದ್ಯಮಿಗಳಿಗೆ ಕೆಐಎಡಿಬಿಯವರು ಭೂಮಿ ನೀಡುತ್ತಿಲ್ಲ’ ಎಂದು ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ ದೂರಿದರು.
ಜಿಲ್ಲಾಧಿಕಾರಿ ಜತೆ ಕೆಐಎಡಿಬಿ ಅಧಿಕಾರಿಗಳ ಸಭೆ ನಡೆಸಿ ವಿವರ ಪಡೆದುಕೊಳ್ಳವಂತೆ ಸಚಿವ ಲಾಡ್ ತಿಳಿಸಿದರು.
‘ಶಿಥಿಲಾವಸ್ಥೆಯಲ್ಲಿರುವ 327 ಕೊಠಡಿಗಳನ್ನು ನೆಲ ಸಮಗೊಳಿಸಲು ವಾರದೊಳಗೆ ಟೆಂಡರ್ ಆಹ್ವಾನಿಸಿ ಕ್ರಮ ವಹಿಸಲಾಗುವುದು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಉಪಸ್ಥಿತರಿದ್ದರು.
ಮಹಾತ್ಮಗಾಂಧಿ ನಗರ ವಿಕಾಶ ಯೋಜನೆ (ಎಂಜಿಎನ್‌ವಿವೈ) ಕಾಮಗಾರಿ ನಡೆದಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕುಪ್ರದೀಪ ಶೆಟ್ಟರ ಸದಸ್ಯ ವಿಧಾನ ಪರಿಷತ್ತು
ಮಡಕಿಕೊಪ್ಪ ಕುಂಬಾರಕೊಪ್ಪ ಹತ್ತಿಕೊಳ್ಳ ಇತರೆಡೆಗಳಲ್ಲಿ ಗೌಳಿ ಸಮುದಾಯದವರಿಗೆ ಸಾಗುವಳಿ ಪತ್ರ ನೀಡಲು ಕ್ರಮ ವಹಿಸಬಹೇಕು. ಗೌಳಿ ದಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕುಎಫ್.ಎಚ್.ಜಕ್ಕಪ್ಪನವರ ಸದಸ್ಯ ವಿಧಾನ ಪರಿಷತ್ತು
ಮನೆಗಳಲ್ಲಿ ಪ್ರತಿದಿನ ಸಂಜೆ ಮೂರು ಗಂಟೆ ಮೊಬೈಲ್ ಫೋನ್ ಟಿವಿ ಬಂದ್ ವಿದ್ಯಾರ್ಥಿಗಳನ್ನು ಓದಲು ಪ್ರೋತ್ಸಾಹಿಸುವಂತೆ ಪೋಷಕರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯವರು ಕ್ರಮ ವಹಿಸಬೇಕುಎಂ.ಆರ್.ಪಾಟೀಲ ಶಾಸಕ
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಬೇಕು. ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇಲ್ಲದವರಿಗೆ ನೋಟಿಸ್ ನೀಡಿ ಅಮಾನತುಗೊಳಿಸಲು ಕ್ರಮವಹಿಸಬೇಕುಸಂತೋಷ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.