ADVERTISEMENT

ನವಲಗುಂದ: ವಸತಿ ನಿಲಯ ಕಳಪೆ ಕಾಮಗಾರಿಗೆ ಶಾಸಕ ಕೋನರಡ್ಡಿ ಗರಂ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:20 IST
Last Updated 3 ಜೂನ್ 2025, 14:20 IST
ನವಲಗುಂದ ಪಟ್ಟಣದ ರಾಣಿ ಚನ್ನಮ್ಮ ಶಾಲೆ ಬಳಿ ₹6 ಕೋಟಿ  ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿಲಯ ಕಟ್ಟಡ ಕಾಮಗಾರಿಯನ್ನು ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಪರಿಶೀಲಿಸಿದರು.
ನವಲಗುಂದ ಪಟ್ಟಣದ ರಾಣಿ ಚನ್ನಮ್ಮ ಶಾಲೆ ಬಳಿ ₹6 ಕೋಟಿ  ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿಲಯ ಕಟ್ಟಡ ಕಾಮಗಾರಿಯನ್ನು ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಪರಿಶೀಲಿಸಿದರು.   

ನವಲಗುಂದ: ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಅಲ್ಲದೆ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ. ಗುಣಮಟ್ಟದ ಕಾಮಗಾರಿ ಮಾಡದೇ ಕಟ್ಟಡದ ಎಲ್ಲ ಕೆಲಸ ಮುಗಿಸಲಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಲೋಕೋಪಯೋಗಿ ಇಲಾಖೆಯ ಎಇಇ ಸೋಮನಗೌಡ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು

ಪಟ್ಟಣದ ರಾಣಿ ಚನ್ನಮ್ಮ ಶಾಲೆ ಬಳಿ ₹6 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ನಂತರ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ವಸತಿ ನಿಲಯದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದರು. ಅವರಿಗೆ ಅನುಕೂಲವಾಗಲೆಂದು 100 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುದಾನ ಮಂಜೂರು ಮಾಡಿಸಿದ್ದೇನೆ. ಅನುದಾನ ಬಿಡುಗಡೆಯಾಗಿದೆ. ಆದರೆ, ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೇ, ಕಾಮಗಾರಿ ಕೂಡ ಗುಣಮಟ್ಟದಿಂದ ಕೂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

‘ಕಟ್ಟಡದ ಕ್ಯೂರಿಂಗ್ ಮತ್ತು ಪ್ಲಾಸ್ಟರಿಂಗ್ ಸಮರ್ಪಕವಾಗಿ ಮಾಡಬೇಕು. ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಎಂಜಿ‌ನಿಯರ್ ಕಲ್ಮೇಶ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಸಂದೇಶ ನಿಡವಣಿ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್‌ ಹನುಮಂತ ವಾಲಿಕರ್, ಸದಸ್ಯರಾದ ಜೀವನ ಪವಾರ, ಮೋದಿನ ಶಿರೂರ, ರವಿ ಬಡಿಗೇರಿ, ಮದರಸಾಬ ಉಗುರಗೋಳ, ಸುರೇಶ ಸುಣಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.