ADVERTISEMENT

ಕಿಚಡಿ ಸರ್ಕಾರದ ಕಿಚಡಿ ಬಜೆಟ್‌: ಜೋಶಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 12:30 IST
Last Updated 5 ಜುಲೈ 2018, 12:30 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಕಿಚಡಿ ಸರ್ಕಾರದ ಕಿಚಡಿ ಬಜೆಟ್ ಆಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲಾ ಇಲಾಖೆಗಳ ಅನುದಾನಗಳಿಗೆ ಕತ್ತರಿ ಹಾಕಲಾಗಿದ್ದು, ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆಯೆಂದು ಪದೇ ಪದೇ ಗಂಟಲು ಹರಿಯುವಂತೆ ಕೂಗುತ್ತಿದ್ದ ಇದೇ ಕುಮಾರಸ್ವಾಮಿ ಮತ್ತೆ ತೈಲದ ಮೇಲಿನ ತೆರಿಗೆ ಹೆಚ್ಚಿಸಿರುವುದಕ್ಕೆ ಅವರೇ ಉತ್ತರಿಸಬೇಕಿದೆ. ಕಳೆದ ಹನ್ನೊಂದು ದಿನಗಳಿಂದ ದೇಶದಲ್ಲಿ ನಿರಂತರ ಇಳಿಮುಖ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಈ ಬಜೆಟ್ಟಿನ ಅಧಿಕ ತೆರಿಗೆ ಪ್ರಸ್ತಾವನೆಯಿಂದ ಅದರ ಲಾಭ ರಾಜ್ಯದ ಜನರಿಗೆ ಸಿಗದಂತೆ ಮಾಡಿರುವುದು ಕುಮಾರಸ್ವಾಮಿ ಬಜೆಟ್‌ನ ವಿಶೇಷತೆ’ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ರಾಜ್ಯದ 7 ಜಿಲ್ಲೆಗಳಲ್ಲಿ ಹೊಸ ಯೋಜನೆಗಳ ಬಗ್ಗೆ ಪ್ರಸ್ತಾಪವಿದ್ದು ಇದರಲ್ಲಿ 5 ಜಿಲ್ಲೆಗಳು ದಕ್ಷಿಣ ಕರ್ನಾಟಕಕ್ಕೆ ಸೇರಿವೆ. ಭಾಗಕ್ಕೆ ದೊರೆತಿದ್ದು ಇಲ್ಲಿಯೂ ಉತ್ತರ ಕರ್ನಾಟವನ್ನು ಮಲತಾಯಿ ಧೋರಣೆಯಿಂದ ನೋಡಲಾಗಿದೆ. ಹುಬ್ಬಳ್ಳಿ–ಧಾರವಾಡದ ಹೆಸರು ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಅನ್ನಭಾಗ್ಯದ 7 ಕೆ.ಜಿ. ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಒಟ್ಟು 2 ಲಕ್ಷ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಬೃಹತ್ತಾದ ಬಜೆಟ್ ಎಂದು ಹೇಳಾಗುತ್ತಿದ್ದರೂ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಖಚಿತ ಮಾಹಿತಿ ಇಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆ ಕುರಿತು ನಿಖರ ಪ್ರಸ್ತಾವನೆಗಳಿಲ್ಲದ ಈ ಬಜೆಟ್ ಒಂದು ನಿರರ್ಥಕ ಹಾಗು ರಚನಾತ್ಮಕವಲ್ಲದ ಬಜೆಟ್ ಆಗಿದೆ ಎಂದು ಸಂಸದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.