ಹುಬ್ಬಳ್ಳಿ: ‘ನಲವತ್ತು ವರ್ಷದಿಂದ ಸಮಾಜವಾದ ಪ್ರತಿಪಾದಿಸುತ್ತ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಟ್ಟ ಮೊದಲ ಬಾರಿಗೆ ಮುಡಾ ಹಗರಣದ ಕುರಿತು ಚರ್ಚೆಗೆ ಆಸ್ಪದ ಕೊಡದೆ ಪಲಾಯನ ಮಾಡಿರುವುದು ದುರ್ದೈವ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಗರಣದಲ್ಲಿ ಸಿದ್ದರಾಮಯ್ಯ ಅವರ ಕೈವಾಡವಿಲ್ಲದಿದ್ದರೆ, ಶುದ್ಧರಾಗಿದ್ದರೆ ಚರ್ಚೆಗೆ ಆಸ್ಪದ ನೀಡಬೇಕಿತ್ತು. ಅವರಲ್ಲಿ ಗೊಂದಲ ಕಾಡುತ್ತಿರುವುದರಿಂದ, ಅಧಿವೇಶನವನ್ನು ಮೊಟುಕುಗೊಳಿಸಿದ್ದಾರೆ’ ಎಂದು ಆರೋಪಿಸಿದರು.
‘ಮುಡಾ ಹಗರಣದ ಕುರಿತು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಯಾವ ರಾಜಕೀಯನ್ನೂ ಮಾಡುತ್ತಿಲ್ಲ. ರಾಜ್ಯದ ಸಾಕಷ್ಟು ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿತ್ತು. ವಾಲ್ಮೀಕಿ ನಿಗಮ ಮಂಡಳಿಯ ಹಗರಣದ ಬಗ್ಗೆಯೂ ಮಾತನಾಡಲು ಬಿಡುತ್ತಿಲ್ಲ. ಈ ಹಗರಣಗಳಲ್ಲಿ ಸರ್ಕಾರದ ಪಾತ್ರವಿದೆ ಎಂದು ಎಲ್ಲರಿಗೂ ತಿಳಿದಿದೆ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಹೆಸರಿಡುವ ಮೂಲಕ, ವಿಷಯಾಂತರ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಾವಂತೂ ಸರ್ಕಾರ ಬೀಳಿಸುವ ಯತ್ನ ಮಾಡುತ್ತಿಲ್ಲ. ವಿರೋಧ ಪಕ್ಷವಾಗಿ ಹೋರಾಟ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಸಮಸ್ಯೆಯಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಸದ್ಯ ಅವರೇ ತಿರುಗಿ ಬೀಳುವ ಪರಿಸ್ಥಿತಿ ಬರಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.