ADVERTISEMENT

ದೊಡ್ಡಮ್ಮನ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 5:18 IST
Last Updated 29 ಡಿಸೆಂಬರ್ 2022, 5:18 IST
   

ಹುಬ್ಬಳ್ಳಿ: ನಗರದ ರಣದಮ್ಮಾ ಕಾಲೊನಿಯಲ್ಲಿ ಚಿನ್ನಾಭರಣಕ್ಕಾಗಿ ಸ್ವಂತ ದೊಡ್ಡಮ್ಮನ ಕತ್ತು ಕೊಯ್ದು ಕೊಲೆ ಮಾಡಿ, ಎರಡು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮಹಾಂತೇಶ ಚಿಕ್ಕಮಠ (55) ಎಂಬಾತನನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಘಟಗಿ ತಾಲ್ಲೂಕಿನ ಗಂಬ್ಯಾಪೂರದ ಮಹಾಂತೇಶ ತನ್ನ ದೊಡ್ಡಮ್ಮ ಕಮಲವ್ವ ಹೆಬ್ಬಳ್ಳಿಮಠ ಅವರನ್ನು ಅ. 24ರಂದು ರಾತ್ರಿ ಕತ್ತು ಕೊಯ್ದು ಕೊಲೆ ಮಾಡಿದ್ದ. ನಂತರ, ಕೊರಳಿನಲ್ಲಿದ್ದ ಚಿನ್ನದ ಸರ ಮತ್ತು ಕಿವಿ ಕತ್ತರಿಸಿ ಓಲೆಯೊಂದಿಗೆ, ಮನೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಆರೋಪಿ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ಸುತ್ತಾಡಿಕೊಂಡು, ಕಡೆಗೆ ಬೆಳಗಾವಿಗೆ ಬಂದು ತಲೆ ಮರೆಸಿಕೊಂಡಿದ್ದ. ಆ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.

ADVERTISEMENT

ಚಾಕು ಇರಿತ: ಹಳೆ ಹುಬ್ಬಳ್ಳಿಯ ಎಸ್‌.ಎಂ. ಕೃಷ್ಣಾ ನಗರದಲ್ಲಿ ಬುಧವಾರ ಸುನೀಲ ಕೈರಾಯಿ ಎಂಬ ರೌಡಿ ಶೀಟರ್‌ಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದಿದೆ. ಗಾಯಗೊಂಡಿರುವ ಸುನೀಲನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಅಯೋಧ್ಯೆ ನಗರದ ಸುನೀಲ ಹಾಗೂ ನಾಲ್ಕೈದು ಯುವಕರ ನಡುವೆ ಸಂಜೆ 7.30ರ ಸುಮಾರಿಗೆ ಜಗಳವಾಗಿದ್ದು, ಈ ವೇಳೆ ಯುವಕರು ಸುನೀಲನ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸ್ಥಳೀಯರು ಆತನನ್ನು ಕಿಮ್ಸ್‌ಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಕಸಬಾಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.