
ಕಲಘಟಗಿ: ವಿದ್ಯುತ್ ಅವಘಡದಿಂದ ಸುಟ್ಟುಹೋದ ರೈತರ ಕಬ್ಬಿನ ಬೆಳೆಗೆ ಸರ್ಕಾರ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಒತ್ತಾಯಿಸಿದರು.
ತಾಲ್ಲೂಕಿನ ಜಿನ್ನೂರ, ಸೋಲಾರಗೊಪ್ಪ, ಭೂಗೇನಾಗರಕೊಪ್ಪ ಗ್ರಾಮಗಳಲ್ಲಿ ವಿದ್ಯುತ್ ಅವಘಡದಿಂದ ಕಬ್ಬಿನ ಫಸಲು ಸುಟ್ಟು ಹಾನಿಯಾದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.
‘3 ವರ್ಷಗಳಿಂದ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹೆಸ್ಕಾಂ ನಿರ್ಲಕ್ಷ್ಯದಿಂದ ಕಬ್ಬು ಸುಟ್ಟು ಹಾನಿ ಸಂಭವಿಸಿದರೂ ಪರಿಹಾರ ಮರೀಚಿಕೆಯಾಗಿ, ರೈತ ಸಮುದಾಯ ಸಂಕಷ್ಟದದೆ’ ಎಂದರು.
‘ರೈತರ ಜಮೀನುಗಳಲ್ಲಿ ಹಾದುಹೋದ ವಿದ್ಯುತ್ ತಂತಿ, ಪರಿವರ್ತಕಗಳಿಂದಲೇ ಅಗ್ನಿ ಅವಘಡಗಳು ಸಂಭವಿಸಿ ಬೆಳೆ ಹಾನಿಯಾದರೂ ಹೆಸ್ಕಾಂನವರು ನಿರ್ಲಕ್ಷ್ಯ ತೋರುತ್ತಲೇ ಇದ್ದಾರೆ’ ಎಂದು ಕಿಡಿಕಾರಿದರು.
ತಾಲ್ಲೂಕಿನ ಸೋಲಾರಗೊಪ್ಪ ಗ್ರಾಮದ ರೈತರಾದ ಪ್ರವೀಣ ಜಾಬಿನ್, ಪಕ್ಕೀರಪ್ಪ ಮುಕುಂದನವರ ಹಾಗೂ ಜಿನ್ನೂರ ಗ್ರಾಮದ ಕಲ್ಲಪ್ಪ ಸಂಗಪ್ಪ ಗರಗ, ಶಿವಾನಂದ ಗರಗ ಅವರ ಜಮೀನುಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲು ಆಲಿಸಿದರು.
ತಾಲ್ಲೂಕಿನ ಮಲಕನಕೊಪ್ಪ ಕೂಲಿ ಕಾರ್ಮಿಕ ಶಂಕ್ರಪ್ಪ ಮಂತ್ರೋಡಿ ಅವರು ಮಿಶ್ರಿಕೋಟಿ ಗ್ರಾಮದ ಹತ್ತಿರ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ನೆರವು ನೀಡಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಾರಿ ಶಿಂದೆ, ಅಣ್ಣಪ್ಪ ಓಲೇಕಾರ್, ಕಿರಣ ಪಾಟೀಲ ಕುಲಕರ್ಣಿ, ರವಿ ಅಲ್ಲಾಪುರ, ಸುರೇಶ ಶೀಲವಂತರ, ಸಂತೋಷ್ ಮಾದನಭಾವಿ, ಶ್ರೀಧರ ದ್ಯಾವಪ್ಪನವರ, ಸದಾನಂದ ಚಿಂತಾಮಣಿ, ಬಿ.ಎಂ. ಹಿರೇಮಠ, ಅಶೋಕ ಆಡಿನವರ, ಆನಂದ ಕಡ್ಲಾಸ್ಕರ್, ಪುಂಡಲೀಕ ಜಾಧವ, ಬೀರಪ್ಪ ಡೊಳ್ಳಿನ, ವಿ.ಎಸ್. ಬೆಣ್ಣಿ, ಅಶೋಕ ಆಡಿನವರ, ವಿನಾಯಕ ಗೌಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.