ADVERTISEMENT

ಧಾರವಾಡ| ಆರೋಗ್ಯಕ್ಕೆ ಪೂರಕ ಜಂತುಹುಳು ನಿವಾರಕ ಮಾತ್ರೆ: ಎಸ್.ಎಸ್.ಕೆಳದಿಮಠ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ: ಎಸ್.ಎಸ್.ಕೆಳದಿಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 5:06 IST
Last Updated 11 ಫೆಬ್ರುವರಿ 2026, 5:06 IST
ಧಾರವಾಡದ ಕೆ.ಇ.ಬೋರ್ಡ್ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು 
ಧಾರವಾಡದ ಕೆ.ಇ.ಬೋರ್ಡ್ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು    

ಧಾರವಾಡ: ‘ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗದಂತೆ ಮುನ್ನೆಚ್ಚರಿಕೆ ವಹಿಸಲು ಪ್ರತಿ ಮಗುವಿಗೆ ಜಂತುಹುಳು ನಿವಾರಕ ಮಾತ್ರೆ ನೀಡುವ ಅಗತ್ಯವಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಗರದ ಮಾಳಮಡ್ಡಿಯ ಕೆ.ಇ.ಬೋರ್ಡ್ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದ ಅಂಗವಾಗಿ ಎಲ್ಲ ಶಾಲಾ ಕಾಲೇಜುಗಳ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಿ ಜಂತುಹುಳ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುತ್ತಿದೆ. ನಿಗದಿತ (19 ವರ್ಷದೊಳಗಿನವರು) ವಯೋಮಾನದವರು ಜಂತು ಹುಳು ನಿವಾರಣೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು.

ADVERTISEMENT

‘ಶಾಲಾ ಶಿಕ್ಷಣ ಇಲಾಖೆ ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ ಮತ್ತು ಸಂಸ್ಕಾರ ಕಲಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯು ಆದ್ಯತೆ ನೀಡಿ ಶಾಲಾ ವೇಳಾಪಟ್ಟಿಯನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ’ ಎಂದು ತಿಳಿಸಿದರು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಜಿಲ್ಲಾ ಆರ್.ಸಿ.ಎಚ್.ಓ ಸುಜಾತಾ ಹಸವಿಮಠ, ಪ್ರಾಚಾರ್ಯ ಎನ್.ಎಸ್.ಗೋವಿಂದರೆಡ್ಡಿ, ಜಿಲ್ಲಾ ಆರೋಗ್ಯ ಪ್ರಭಾರ ಶಿಕ್ಷಣಾಧಿಕಾರಿ ಎನ್.ಎಂ.ಅಗಡಿ, ತಾಲ್ಲೂಕು ವೈದ್ಯಾಧಿಕಾರಿ ಕೆ.ಎನ್.ತನುಜಾ, ವಾರ್ತಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಸುರೇಶ ಹಿರೇಮಠ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಅಧಿಕಾರಿ ಎಸ್.ಬಿ.ಕಳಸೂರಮಠ, ಡಾ. ಮಂಜುಳಾ ಮುದುಕಣ್ಣವರ ಇದ್ದರು.

579 ಲಕ್ಷ ಅಲ್ಬೆಂಡಜೋಲ್ ಮಾತ್ರೆ ಲಭ್ಯ

‘ಜಿಲ್ಲೆಯಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 563 ಲಕ್ಷ ಅಲ್ಬೆಂಡಜೋಲ್ ಮಾತ್ರೆಗಳ ಅವಶ್ಯಕತೆ ಇದ್ದು ಪ್ರಸ್ತುತ 579 ಲಕ್ಷ ಲಭ್ಯವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದರು. ‘ಅಲ್ಬೆಂಡಜೋಲ್ ಮಾತ್ರೆಯನ್ನು 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಸೇರಿಸಿ ಸೇವಿಸಲು ನೀಡಬೇಕು. 2 ರಿಂದ 3 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಸೇರಿಸಿ ಸೇವಿಸಲು ಕೊಡಬೇಕು. 3 ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.