ADVERTISEMENT

ನವಲಗುಂದ; ಮಾದರಿ ಕ್ಷೇತ್ರ ಮಾಡಲು ಶ್ರಮ–ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆ, ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:56 IST
Last Updated 9 ಫೆಬ್ರುವರಿ 2026, 6:56 IST
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ನಡೆದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ತಡೆ ಕಾಮಗಾರಿ ಶಂಕುಸ್ಥಾಪನೆ, ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು 
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ನಡೆದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ತಡೆ ಕಾಮಗಾರಿ ಶಂಕುಸ್ಥಾಪನೆ, ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು    

ಹುಬ್ಬಳ್ಳಿ: ‘ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು, ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸಲಾಗುವುದು. ಅಣ್ಣಿಗೇರಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ನಡೆದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ತಡೆ ಕಾಮಗಾರಿ ಶಂಕುಸ್ಥಾಪನೆ, ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ, ಅವರು ಮಾತನಾಡಿದರು.

‘ಬೆಣ್ಣೆಹಳ್ಳ ಯೋಜನೆ ಕಾಮಗಾರಿಗಳ ಅನುಷ್ಠಾನಕಾಗಿ ₹1,610 ಕೋಟಿ ಕ್ರಿಯಾಯೋಜನೆ ತಯಾರಿಸಿ, ಕೇಂದ್ರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ₹200 ಕೋಟಿ ಅನುದಾನವನ್ನು ನಾವು ಬಿಡುಗಡೆ ಮಾಡಿದ್ದೇವೆ. ಜೊತೆಗೆ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹150 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು. 

ADVERTISEMENT

‘ಈ ಯೋಜನೆಯ ಅನುಷ್ಠಾನಕ್ಕೆ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರ ಒತ್ತಾಸೆ ಕಾರಣ. ಬೆಣ್ಣೆಹಳ್ಳ ಪ್ರವಾಹದಿಂದ 37 ಹಳ್ಳಿಗಳಿಗೆ ಹಾಗೂ 20 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಸಮಸ್ಯೆ ಆಗುತಿತ್ತು. ಯೋಜನೆಯ ಜಾರಿಯಿಂದ ಸಮಸ್ಯೆ ಪರಿಹಾರವಾಗಲಿದೆ’ ಎಂದರು. 

‘ಗ್ಯಾರಂಟಿ‌ ಯೋಜನೆಗಳಿಗೆ ₹1.16 ಲಕ್ಷ ಕೋಟಿ ವ್ಯಯಿಸಲಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ  ₹ 5 ಸಾವಿರ ನೀಡಲಾಗುತ್ತಿದೆ. ವರ್ಷಕ್ಕೆ ₹50 ಸಾವಿರ ಹಣ ನೇರವಾಗಿ ಅವರಿಗೆ ತಲುಪುತ್ತಿದೆ. ಜೊತೆಗೆ ಸುಮಾರು ₹ 25 ಸಾವಿರ ಕೋಟಿ ನೀರಾವರಿ  ಯೋಜನೆಗಳಿಗೆ ಖರ್ಚು ಮಾಡಲಾಗಿದೆ’ ಎಂದು ಹೇಳಿದರು.  

ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿರುವ ದೊಡ್ಡ ಯೋಜನೆಯಿದು. ಯೋಜನೆಯ ಕಾಮಗಾರಿಯಿಂದ 50 ಸಾವಿರ ಎಕರೆ ಬೆಳೆ ಹಾಳಾಗುವುದು ತಪ್ಪುತ್ತದೆ’ ಎಂದರು.

’ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದರು. ಬಡವರ ಬಗ್ಗೆ ಬಿಜೆಪಿಯವರಿಗೆ ತಾತ್ಸಾರ ಹಾಗೂ ನಿರ್ಲಕ್ಷ್ಯತನ ಬೇಡ. ನಿಮ್ಮ ಸರ್ಕಾರದ ಅವಧಿಯಲ್ಲಿ ಏನು ಮಾಡಿದ್ದೀರಿ ಎಂದು ತಿಳಿಸಿ’ ಎಂದರು. 

ಸಚಿವ ಸಂತೋಷ ಲಾಡ್‌ ಅವರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಯಾವ ಯೋಜನೆಗಳೂ ಜಾರಿಯಾಗಲಿಲ್ಲ. ಬಿಡಿಗಾಸು ಹಣವನ್ನೂ ಬಿಡುಗಡೆ ಮಾಡಲಿಲ್ಲ. ನಮ್ಮ ಸಾಧನೆ ಕಂಡು ಬಿಜೆಪಿಯವರು ಟೀಕಿಸುತ್ತಿದ್ದಾರೆ‘ ಎಂದರು. 

ಶಾಸಕ ಎನ್‌.ಎಚ್‌.ಕೋನರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಸ್ವಾಗತಿಸಿದರು.  ಮುಖಂಡರಾದ ಎ.ಎಂ.ಹಿಂಡಸಗಿರಿ, ಅಲ್ತಾಫ್‌ ಹಳ್ಳೂರು, ಶಾಕೀರ ಸನದಿ, ಕುಸುಮಾ ಶಿವಳ್ಳಿ, ಅನಿಲ್‌ ಕುಮಾರ್ ಹಾಗೂ ಪ್ರಮುಖರು ಹಾಜರಿದ್ದರು. 

ಕಾರ್ಯಕ್ರಮ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ಉಡುಪಿನೊಂದಿಕ ಕಲಾವಿದರು ಕಾಣಿಸಿಕೊಂಡಿದ್ದು ಹೀಗೆ.. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ 

ಸರ್ಕಾರ ಆರ್ಥಿಕವಾಗಿ ಭದ್ರ: ಅನಗತ್ಯ ಟೀಕೆ ಬೇಡ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳೂ ನಡೆಯುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

– ಸಿದ್ದರಾಮಯ್ಯ ಮುಖ್ಯಮಂತ್ರಿ

30 ಸಾವಿರಕ್ಕೂ ಅಧಿಕ ಜನರು ಭಾಗಿ ಕಾರ್ಯಕ್ರಮದಲ್ಲಿ ಧಾರವಾಡ ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಸಮಾರಂಭಕ್ಕಾಗಿ ಜನರನ್ನು ಕರೆತರಲು 200ಕ್ಕೂ ಹೆಚ್ಚು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ನಾಲ್ಕು ಕಡೆ ಮಾಡಿದ್ದರಿಂದ ದಟ್ಟಣೆ ಆಗಲಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.