
ಪ್ರಜಾವಾಣಿ ವಾರ್ತೆ
ನವಲಗುಂದ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಹಾಗೂ ದಲಿತ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಶನಿವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸುಧೀರ ಸಾಹುಕಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ವಿಭಾಗ ಸಂಚಾಲಕ ಶ್ರೀಮಂತ ನಡವಿನಕೇರಿ ಹಾಗೂ ಜಿಲ್ಲಾ ಸಂಚಾಲಕ ಪುಂಡಲೀಕ ಚಲವಾದಿ ಮಾತನಾಡಿ, ಮರ್ಯಾದೆ ಹತ್ಯೆ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಕೊಲೆಯಾದ ಮಾನ್ಯಾಳ ಪತಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ₹1 ಕೋಟಿ ಸಹಾಯಧನ ನೀಡಿ. ಈ ಘಟನೆಯಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳಬೇಕು ಎಂದು ಅಗ್ರಹಿಸಿದರು.
ತಾಲ್ಲೂಕು ಸಂಚಾಲಕ ಮಾಲತೇಶ ಚಲವಾದಿ ಮಾತನಾಡಿ, ಬಸವಣ್ಣವರ ತತ್ವ ಸಿದ್ಧಾಂತ ತುಳಿದು ಮಾನವೀಯತೆ ಮರೆತ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ನಾಗರಾಜ್ ಕಾಳೆ, ಕಾಶೀನಾಥ ಕಾಳೆ, ನಂದಿನಿ ಹಾದಿಮನಿ, ಸಿದ್ದಾರ್ಥ ಮಲ್ಲಮ್ಮನವರ, ಹನಮಂತ ಕನಸವಿ, ಗುರು ಕ್ವಾಟಿ, ನಿಂಗಪ್ಪ ಕಾಳಿ, ಹನಮಂತ ಚಲವಾದಿ, ಸತೀಶ ಪೂಜಾರ, ಸರೋಜ ಹೊಸಮನಿ, ರೇಖಾ ಚಲವಾದಿ, ನಿಂಗವ್ವ ಶಿವನನ್ನವರ ಸೇರಿದಂತೆ ದಲಿತ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.