ನವಲಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ರೈತರ ಕೈಸೇರಬೇಕಾದ ಹೆಸರು ಬೆಳೆಗಳು ಹಾಳಾಗುವ ಹಂತ ತಲುಪಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಹಲವಾರು ಗ್ರಾಮಗಳಲ್ಲಿ ಹೊಲಗಳಲ್ಲಿನ ಒಡ್ಡುಗಳು ಒಡೆದು ಹೊಲಗಳಲ್ಲಿ ಭಾರಿ ಪ್ರಮಾಣದ ನೀರು ಹರಿದ ಪರಿಣಾಮ ಬೆಳೆಗಳು ನೀರಲ್ಲಿ ನಿಂತಿವೆ.
ತಾಲ್ಲೂಕಿನ ತಡಹಾಳ ಗ್ರಾಮದ ಮಧ್ಯದಲ್ಲಿನ ಕೂರ್ಲಗೇರಿ ಗ್ರಾಮದ ಬೆಣ್ಣೆಹಳ್ಳದ ಸೇತುವೆಯ ಮಧ್ಯದಲ್ಲಿನ ಮಣ್ಣು ಹಳ್ಳಕ್ಕೆ ತೇಲಿ ಹೋಗಿದ್ದರಿಂದ ಗದಗ–ನರಗುಂದ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಜತೆಗೆ ತಡಹಾಳ–ದಾಟನಾಳ ಗ್ರಾಮದ ಮಧ್ಯೆ ಕಕ್ಕಿ ಹಳ್ಳದ ಹರಿವಿನಿಂದ ದಾಟನಾಳ ಗ್ರಾಮದ ಸಂಚಾರವೂ ಸ್ಥಗಿತಗೊಂಡಿದೆ.
ಶಾನವಾಡ ಗ್ರಾಮದ ತಳವಾರ ಓಣಿಯಲ್ಲಿ ಮಳೆಯ ನೀರು ನುಗ್ಗಿದ ಪರಿಣಾಮ ಮನೆ ಮುಂದೆ ನೀರು ನಿಂತಿತ್ತು. ಹಾಳಕುಸುಗಲ್ ಹಾಗೂ ಹುಬ್ಬಳ್ಳಿ ಸಂಪರ್ಕ ರಸ್ತೆಯ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯೂ ಹಾಳಾಗಿದೆ.
‘ಬೋಗಾನೂರು ಗ್ರಾಮದಲ್ಲಿ ಮಳೆ ನೀರಿನಿಂದಾಗಿ 15 ಮನೆಗಳು ಜಲಾವೃತ್ತಗೊಂಡಿದ್ದು, ಗ್ರಾಮದ 50 ಜನರಿಗಾಗಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್ ಸುಧೀರ ಸಾಹುಕಾರ ತಿಳಿಸಿದ್ದಾರೆ.
ಹಾನಿಯಾದ ಕೆಲ ಪ್ರದೇಶಗಳಿಗೆ ಶಾಸಕ ಎನ್.ಕೋನರಡ್ಡಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಗುವುದಾಗಿ ಹೇಳಿದರು.
36 ಮನೆಗೆ ಹಾನಿ
ಪಟ್ಟಣದಲ್ಲಿ ಮಳೆಯಿಂದಾಗಿ 8 ಮನೆಗಳು ಕುಸಿದು ಬಿದ್ದಿವೆ. ತಾಲ್ಲೂಕಿನ ಚಿಲಕವಾಡದ ಎರಡು ಬೆಳಹಾರ ಗ್ರಾಮದ 2 ಶಾನವಾಡ ಗ್ರಾಮದಲ್ಲಿ 6 ಪಡೆಸೂರು ಕುಮಾರಗೊಪ್ಪ ಶಿರಕೋಳ ಗ್ರಾಮದಲ್ಲಿ ತಲಾ ಒಂದು ಗೊಬ್ಬರಗುಂಪಿ ನಾಗನೂರು ಹಾಗೂ ಅಮರಗೋಳ ಗ್ರಾಮದಲ್ಲಿ ತಲಾ 5 ಮನೆಗಳು ಸೇರಿ ಒಟ್ಟು 36 ಮನೆಗಳಿಗೆ ಹಾನಿಯಾಗಿವೆ’ ಎಂದು ತಹಶೀಲ್ದಾರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.