
ನವಲಗುಂದ: ಪಟ್ಟಣದಲ್ಲಿಯ ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳಿಲ್ಲದೇ ಕತ್ತಲೆ ಆವರಿಸಿದ್ದು, ಪುರಸಭೆಯಿಂದ ಬೀದಿದೀಪಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಪಟ್ಟಣದಿಂದ ಶಾಸಕ ಎನ್.ಎಚ್. ಕೋನರಡ್ಡಿ ಅವರ ಸ್ವಗ್ರಾಮ ಚೀಲಖವಾಡಕ್ಕೆ ತೆರಳುವ ಹಾಗೂ ನವಲಗುಂದ– ಗದಗ ಪ್ರಮುಖ ರಸ್ತೆಯಲ್ಲಿರುವ ಬೀದೀಪಗಳು ಬೆಳಗುತ್ತಿಲ್ಲ. ಅಷ್ಟೇ ಅಲ್ಲದೆ ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ– ಸೊಲ್ಲಾಪುರ ಹೆದ್ದಾರಿಯಲ್ಲಿ ಬಹುತೇಕ ದೀಪಗಳು ವರ್ಷದಿಂದಲೂ ಉರಿಯುತ್ತಿಲ್ಲ. ಕೆಲವು ಕಂಬಗಳು ಮುರಿದು ಯಾವಾಗ ವಾಹನ ಸವಾರರ ಮೇಲೆ ಬೀಳುತ್ತವೆಯೋ ಎಂಬ ಭಯ ನಿರ್ಮಾಣವಾಗಿದೆ.
ರಾಜಕುಮಾರ ಭವನದಿಂದ ಕೋರ್ಟ್, ಪುರಸಭೆ ತಹಶೀಲ್ದಾರ್ ಕಚೇರಿ ತಲುಪುವ ಪ್ರಮುಖ ರಸ್ತೆಯೂ ಇದಕ್ಕೆ ಹೊರತಾಗಿಲ್ಲ. ಪಟ್ಟಣದ ಕೆಲವು ಕಡೆ ಹೈಮಾಸ್ಟ್ ದೀಪದ ವ್ಯವಸ್ಥೆ ಇದೆ. ಅದರ ಬೆಳಕು ಒಂದು ಮೂಲೆಗೆ ಸೀಮಿತವಾಗಿದ್ದು, ಉಳಿದ 3 ಮೂಲೆಗಳು ಕತ್ತಲಲ್ಲಿವೆ.
ಕುರಹಟ್ಟಿ ಪ್ಲಾಟ್, ಜೋಶಿ ಪ್ಲಾಟ್, ಬಸವೇಶ್ವರ ನಗರ, ಹೆಬ್ಬಳ್ಳಿ ಪ್ಲಾಟ್, ಆನೆಗುಂದಿ ಪ್ಲಾಟ್, ಗೌಡ್ರಪ್ಲಾಟ್, ಗುಳೇದ ಪ್ಲಾಟ್ ಸೇರಿದಂತೆ ಪಟ್ಟಣದೊಳಗಿನ ಹಲವು ಬಡಾವಣೆಗಳಲ್ಲೂ ಬೀದಿದೀಪಗಳ ನಿರ್ವಹಣೆ ಹಳಿ ತಪ್ಪಿದೆ.
ಭಯದ ಸ್ಥಿತಿ ನಿರ್ಮಾಣ
ಬೆಳಗಿನ ಜಾವ ಮತ್ತು ಸಂಜೆ ವಾಯು ವಿಹಾರಿಗಳು ಹೊರ ವಲಯಕ್ಕೆ ಹೊರಟರೆ ಕತ್ತಲೆಯಿಂದಾಗಿ ಬೆದರುವಂತಾಗಿದೆ. ಹೋಟೆಲ್ ಅಂಗಡಿಗಳಲ್ಲಿನ ಕಾರ್ಮಿಕರು ತಮ್ಮ ಮನೆಗೆ ತೆರಳಲು ಸೈಕಲ್ ಅಥವಾ ನಡೆದುಕೊಂಡು ಹೋಗುತ್ತಾರೆ. ಮನೆ ಸಮೀಪಿಸುವವರೆಗೂ ಅವರು ಭಯದಲ್ಲೇ ಹೋಗುವಂತಾಗಿದೆ. ಕನಿಷ್ಠ ಬೈಕ್ ಇರುವವರು ಮಾತ್ರ ಇಲ್ಲಿ ಸಂಚರಿಸಬಹುದಾದ ವಾತಾವರಣ ಇದೆ. ಉಳಿದವರ ಸಮಸ್ಯೆ ಹೇಳಿದರೂ ಕೇಳುವವರಿಲ್ಲ. ಹಲವೆಡೆ ಹಗಲಿನಲ್ಲಿ ದೀಪ ಉರಿದು ವಿದ್ಯುತ್ ನಷ್ಟ ಉಂಟಾಗುತ್ತಿದೆ. ನಿರ್ವಹಣೆ ಮಾಡುವ ಗುತ್ತಿಗೆದಾರರಲ್ಲಿ ಕ್ರೇನ್ ವ್ಯವಸ್ಥೆ ಇಲ್ಲ ಕೆಟ್ಟಿರುವ ಬೀದಿ ದೀಪಗಳನ್ನು ಬದಲಿಸಲಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ.
‘ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರಿಂದ ಮಧ್ಯರಾತ್ರಿಯವರೆಗೂ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ವಿದ್ಯುತ್ ದೀಪಗಳು ಉರಿಯದೇ ಅವಘಡ ಸಂಭವಿಸುತ್ತಿದೆ. ಬೀದಿ ನಾಯಿಗಳ ಕಾಟವೂ ಹೇಳತೀರದು. ಪುರಸಭೆಯವರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಓಡಾಟ ಕಷ್ಟವಾಗಿದ್ದಲ್ಲದೇ ಅಪರಾಧ ಚಟುವಟಿಕೆಗೂ ಅನುಕೂಲ ಆಗುವಂತಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಬೀದಿದೀಪ ಸಮಸ್ಯೆ ಹೇಳಲು ಸಹಾಯವಾಣಿಯೇ ಇಲ್ಲ. ಪುರಸಭೆ ಅಧ್ಯಕ್ಷರು ಕಣ್ಣಿದ್ದೂ ಕಾಣದಂತೆ ಇದ್ದಾರೆ. ಮುಖ್ಯಾಧಿಕಾರಿಗಳು ಸಂಜೆ ಬಳಿಕ ನಗರ ಹಾಗೂ ಹೊರವಲಯದಲ್ಲಿ ನಡೆದುಕೊಂಡು ಓಡಾಡಿದರೆ ಗೊತ್ತಾಗುತ್ತದೆ-ರೇಷ್ಮಾ ಬಳ್ಳಾರಿ ಸ್ಥಳೀಯ ನಿವಾಸಿ
ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಕೊರತೆಯಿಂದಾಗಿ ಬೀದಿದೀಪ ನಿರ್ವಹಣೆಗೆ ಸಮಸ್ಯೆಯಾಗಿದೆ. ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ತರಲಾಗಿದ್ದು ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು-ಶರಣು ಪೂಜಾರ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.