ADVERTISEMENT

ನೇಹಾ ಕೊಲೆ‌ ಪೂರ್ವನಿಯೋಜಿತ: ತಂದೆ ನಿರಂಜನಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 10:36 IST
Last Updated 21 ಏಪ್ರಿಲ್ 2024, 10:36 IST
ನೇಹಾ ಹಿರೇಮಠ
ನೇಹಾ ಹಿರೇಮಠ   

ಹುಬ್ಬಳ್ಳಿ: ‘ಮಗಳು ನೇಹಾ ಕೊಲೆ ಪೂರ್ವಯೋಜಿತವಾಗಿದ್ದು, ಅದರ ಹಿಂದೆ ಆರೋಪಿ ಫಯಾಜ್ ಅಷ್ಟೇ ಅಲ್ಲ ಇನ್ನೂ ಅನೇಕರು ಇದ್ದಾರೆ’ ಎಂದು ನೇಹಾ ತಂದೆ, ಪಾಲಿಕೆ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಆರೋಪಿಸಿದರು.

ಭಾನುವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಆರೋಪಿ ಫಯಾಜ್ ಅವರ ಕುಟುಂಬದವರ ಹೇಳಿಕೆ ಗಮನಿಸಿದರೆ, ಇದೊಂದು ಪೂರ್ವಯೋಜಿತ ಕೊಲೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಅವರ ವಿರುದ್ಧವೂ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುತ್ತೇನೆ‘ ಎಂದರು.‌

‘ಮಗಳು ಕೊಲೆಯಾದ ದಿನವೇ ನಾಲ್ವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಇನ್ನೂ ಅವರನ್ನು ಬಂಧಿಸಿಲ್ಲ. ಮಗಳು ಫಯಾಜ್‌ನನ್ನು ಪ್ರೀತಿಸಲು ನಿರಾಕರಿಸಿದ್ದಳು. ಫಯಾಜ್‌ಗೆ ಕೆಲವರು ತಲೆಗೆ ತುಂಬಿ, ಮಗಳನ್ನು ಕೊಲೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಪ್ರಕರಣದ ಹಿಂದೆ ಇರುವ ಎಲ್ಲರನ್ನೂ ವಿಚಾರಣೆ ನಡೆಸಬೇಕು‘ ಎಂದು ಆಗ್ರಹಿಸಿದರು.

ADVERTISEMENT
ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ.
–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ, ಧಾರವಾಡ ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಕಠಿಣ ಶಿಕ್ಷೆಗೆ ಅಂಜುಮನ್ ಸಂಸ್ಥೆ ಆಗ್ರಹ: ಕೊಲೆಯಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಮುಸ್ಲಿಂ ಧರ್ಮಗುರುಗಳು, ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ‘ನೇಹಾ ಕೊಲೆ ಅತ್ಯಂತ ಖಂಡನೀಯ. ಈ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿರುವುದು ಸರಿಯಲ್ಲ. ಇದರಲ್ಲಿ ಜಾತಿ, ಧರ್ಮ ಯಾವುದನ್ನೂ ತರಬಾರದು’ ಎಂದರು.

‘ಒಬ್ಬ ಕೊಲೆಯಾಗಿದ್ದಾನೆ ಅಂದರೆ, ಅದು ಇಡೀ ಜನಾಂಗದ ಕೊಲೆ ಎಂದು ಕುರಾನ್ ಹೇಳುತ್ತದೆ. ಈ ಪ್ರಕರಣವನ್ನು ಸಮಸ್ತ ಮುಸ್ಲಿಂ ಸಮುದಾಯ ಖ‌ಂಡಿಸಿದೆ. ತ್ವರಿತ ನ್ಯಾಯಾಲಯ ಸ್ಥಾಪಿಸಿ, ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ ವಿಚಾರಣೆ ನಡೆಸುವ ಮೂಲಕ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ರಾಜ್ಯಕ್ಕೇ ಮಾದರಿಯಾಗಬೇಕು’ ಎಂದು ಹೇಳಿದರು.

ನೇಹಾ ಕೊಲೆ ಆರೋಪಿ ಅನ್ಯ ಕೋಮಿನವನಾಗಿದ್ದಾನೆ. ಲೋಕಸಭಾ ಚುನಾವಣೆ ಸಮಯ ಆಗಿರುವುದರಿಂದ ಕೆಲವರು ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ.
–ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಶಾಸಕ, ಹಾನಗಲ್‌

‘ಹುಬ್ಬಳ್ಳಿ–ಧಾರವಾಡ ಭಾಗದ ಯಾವೊಬ್ಬ ಮುಸ್ಲಿಂ ವಕೀಲರೂ ಆರೋಪಿ ಪರ ವಾದ ಮಾಡಬಾರದು ಎಂದು ಮುತವಲ್ಲಿಗಳ ಸಮ್ಮುಖದಲ್ಲಿ ತೀರ್ಮಾನಿಸಿದ್ದೇವೆ. ವಕೀಲರು ಸಹ ಒಪ್ಪಿಗೆ ನೀಡಿದ್ದಾರೆ. ಆರೋಪಿಗೆ ಶಿಕ್ಷೆಯಾಗುವವರೆಗೂ ಮುಸ್ಲಿಂ ಸಮುದಾಯ ಹಿರೇಮಠ ಅವರ ಕುಟುಂಬದ ಜೊತೆಗೆ ಇರಲಿದೆ’ ಎಂದು ಹಿಂಡಸಗೇರಿ ಹೇಳಿದರು. ಮುಸ್ಲಿಂ ಧರ್ಮಗುರು ತಾಜುದ್ದೀನ್‌ ಖಾದ್ರಿ ಇದ್ದರು. 

ಧಾರವಾಡದಲ್ಲಿ ಇಂದು ಮೌನ ಮೆರವಣಿಗೆ: ‘ನೇಹಾ ಕೊಲೆ ಅಮಾನವೀಯ ಕೃತ್ಯ. ಪ್ರಕರಣದ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಧಾರವಾಡದ ಅಂಜುಮನ್ ಇ ಇಸ್ಲಾಂ ಸಂಸ್ಥೆ ವತಿಯಿಂದ ನಗರದಲ್ಲಿ ಸೋಮವಾರ (ಏ.22)ಮೌನ ಮೆರವಣಿಗೆ ನಡೆಸಲಾಗುತ್ತಿದೆ’ ಎಂದು ಧಾರವಾಡ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ತಿಳಿಸಿದರು. 

ನೇಹಾ ಹಿರೇಮಠ ಕೊಲೆ ಘಟನೆ ಖಂಡಿಸಿ, ಬೆಳಗಾವಿ ಜಿಲ್ಲೆ ಮುನವಳ್ಳಿಯಲ್ಲಿ ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರಿಯಿತು. ಪ್ರತಿಭಟನಕಾರರು, ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬಸ್‌ ಸಂಚಾರ ಯಥಾಸ್ಥಿತಿ ಇತ್ತು.

ಕಾಂಗ್ರೆಸ್ ಸರ್ಕಾರ ಜನರ ಬದುಕಿನ ಗ್ಯಾರಂಟಿ ಕಸಿದುಕೊಂಡು, ‘ಲವ್ ಜಿಹಾದ್‌ ಗ್ಯಾರಂಟಿ’ ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ಲವ್ ಜಿಹಾದ್ ನಡೆಯುತ್ತಿದೆ.
–ಅರವಿಂದ ಬೆಲ್ಲದ, ಶಾಸಕ, ಹು–ಧಾ ಪಶ್ಚಿಮ

‘ಸೂಕ್ಷ್ಮತೆ ಅರಿತು ಮಾತನಾಡಬೇಕು’

ಹುಬ್ಬಳ್ಳಿ: ‘ನೇಹಾ ಕೊಲೆಯನ್ನು ಜಾತಿ, ಧರ್ಮ ಹಾಗೂ ರಾಜಕಾರಣದಂತಹ ವಿಚಾರಕ್ಕೆ ಬಳಸಿಕೊಳ್ಳಬಾರದು. ಇಂತಹ ಪ್ರಕರಣಗಳು ನಡೆದಾಗ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಯಾರೇ ಆದರೂ ಸೂಕ್ಷ್ಮತೆಯಿಂದ ಮಾತನಾಡಬೇಕು. ಕುಟುಂಬಸ್ಥರಿಗೆ ನೋವು ಹಾಗೂ ಅವಮಾನ ಆಗದಂತೆ ನಡೆದುಕೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ನೇಹಾ ಹಿರೇಮಠ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಇಂತಹ ಪ್ರಕರಣದಲ್ಲಿ ಆರೋಪಿ ಒಬ್ಬನೇ ಇರುವುದಿಲ್ಲ. ತನಿಖೆ ಸಾಗಿದಂತೆ ಸಾಕ್ಷ್ಯಗಳು ಸಂಗ್ರಹವಾಗುತ್ತ ಹೋಗುತ್ತವೆ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನೇಹಾ ಕುಟುಂಬಸ್ಥರಿಗೆ ನ್ಯಾಯ ಸಿಗುವರೆಗೂ ನಾವು ಜೊತೆಗೆ ನಿಲ್ಲುತ್ತೇವೆ’ ಎಂದರು.

‘ಮಹಿಳಾ ಆಯೋಗದಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಶಾಲಾ–ಕಾಲೇಜುಗಳಿಗೆ ಭದ್ರತೆ ಒದಗಿಸಲು ಸೂಚನೆ ನೀಡಲಾಗುವುದು’ ಎಂದು ಹೇಳಿದರು.

ನೇಹಾ ಕೊಲೆ ಆರೋಪಿ ಫಯಾಜ್‌ ಮೊಬೈಲ್‌ನಲ್ಲಿದ್ದ ಫೋಟೊಗಳನ್ನು ರಾಜ್ಯ ಸರ್ಕಾರವು ಪೊಲೀಸ್‌ ಅಧಿಕಾರಿಗಳ ಮೂಲಕವೇ ಜಾಲತಾಣದಲ್ಲಿ ಹರಿಯಬಿಡುತ್ತಿದೆ.
–ಮಹೇಶ ಟೆಂಗಿನಕಾಯಿ, ಶಾಸಕ, ಹು–ಧಾ ಸೆಂಟ್ರಲ್
ಕೊಲೆ ಪ್ರಕರಣದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ. ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.
–ಲಕ್ಷ್ಮಿ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.