ADVERTISEMENT

ಹುಬ್ಬಳ್ಳಿ | ಮಠ, ಮಂದಿರ ರಕ್ಷಣೆಗೆ ಹೊಸ ಕಾನೂನಿಗೆ ಮನವಿ: ಗುಣಧರನಂದಿ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 9:20 IST
Last Updated 4 ಸೆಪ್ಟೆಂಬರ್ 2025, 9:20 IST
<div class="paragraphs"><p>ಗುಣಧರನಂದಿ ಮಹಾರಾಜರು</p></div>

ಗುಣಧರನಂದಿ ಮಹಾರಾಜರು

   

ಹುಬ್ಬಳ್ಳಿ: ‘ಮಠ, ಮಂದಿರ, ಸಾಧು–ಸಂತರು ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಯುವಂತಹ ವಿರೋಧಿ ಚಟುವಟಿಕೆಗಳ ನಿಯಂತ್ರಣಕ್ಕೆ ಹೊಸ ಕಾನೂನನ್ನು ಜಾರಿಗೆ ತರಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಲಾಗಿದೆ’ ಎಂದು ನವಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.

ಸಮೀಪದ ವರೂರಿನಲ್ಲಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ವಚನಾನಂದ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಸಾಧು ಸಂತರ ನಿಯೋಗವು ಈಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಧಾರ್ಮಿಕ ಕ್ಷೇತ್ರ ಹಾಗೂ ಸಾಧುಸಂತರ, ಧರ್ಮಾಧಿಕಾರಿಗಳ ರಕ್ಷಣೆಗೆ ಮನವಿ ಮಾಡಿದ್ದು, ಗೃಹ ಸಚಿವರೂ ಇದಕ್ಕೆ ಸ್ಪಂದಿಸಿದ್ದಾರೆ’ ಎಂದರು.

ADVERTISEMENT

‘ಕೆಲ ಸಾಮಾಜಿಕ ಮಾಧ್ಯಮಗಳು ಧಾರ್ಮಿಕ ಕ್ಷೇತ್ರಗಳ ವಿರುದ್ಧ ಅನಗತ್ಯವಾಗಿ ಅಪಪ್ರಾಚಾರ ಮಾಡುತ್ತಿವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿಭಂಗವಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕಬೇಕು. ಧಾರ್ಮಿಕ ತೇಜೋವಧೆ ಮಾಡುವವರ ವಿರುದ್ಧ ಮಾನಹಾನಿ, ದೌರ್ಜನ್ಯ ಪ್ರಕರಣ ದಾಖಲಿಸಬೇಕು’ ಎಂದೂ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಸೆ.8ರಂದು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡುವರು’ ಎಂದರು.

‘ಸೆ.10ರಂದು ನವಗ್ರಹ ತೀರ್ಥ ಕ್ಷೇತ್ರದಿಂದ ಸರ್ವಧರ್ಮಗಳ ಸಾಧು – ಸಂತರಿಂದ ಧರ್ಮಸ್ಥಳಕ್ಕೆ ‘ಧರ್ಮಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಕಟ ನಿವಾರಣೆಗೆ ಪ್ರಾರ್ಥಿಸಲಾಗುತ್ತದೆ’ ಎಂದರು. 

‘ಹಿಂದೂ ಧರ್ಮದಿಂದ ಜೈನಧರ್ಮದ ಮೇಲೆ ಎಂದಿಗೂ ದಬ್ಬಾಳಿಕೆ ನಡೆದಿಲ್ಲ. ಎರಡೂ ಧರ್ಮಗಳ ಧಾರ್ಮಿಕ ವಿಚಾರಗಳು ಒಂದೇ ಇವೆ. ವೀರೇಂದ್ರ ಹೆಗ್ಗಡೆಯವರು ಎಂದಿಗೂ ಹಿಂದೂ – ಜೈನ ಎಂಬ ಭೇದ ಭಾವ ಮಾಡಿಲ್ಲ. ಸರ್ವಧರ್ಮಗಳ ದೇಗುಲ, ಕೆರೆಕಟ್ಟೆಗಳ ಅಭಿವೃದ್ಧಿಗೆ ಕೈಜೋಡಿದ್ದಾರೆ‘ ಎಂದು ಪತ್ರಕರ್ತರ ಪ್ರಶ್ನೆಗೆ ಗುಣಧರನಂದಿ ಮಹಾರಾಜರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.