ADVERTISEMENT

ಹುಬ್ಬಳ್ಳಿ: ಕೋವಿಡ್-19 ಕುರಿತು ಭಯ, ಆತಂಕ ಬೇಡವೇ ಬೇಡ

ಪ್ರಮೋದ
Published 29 ಜುಲೈ 2020, 11:19 IST
Last Updated 29 ಜುಲೈ 2020, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಹುಬ್ಬಳ್ಳಿ: ’ಕೊರೊನಾ ಸೋಂಕು ಅಂಟಿಕೊಂಡರೆ ಸತ್ತೇ ಹೋಗುತ್ತಾರೆ ಎಂದು ಬಹಳಷ್ಟು ಜನ ನಂಬಿಕೊಂಡಿದ್ದಾರೆ. ಸೋಂಕು ತಗುಲಿದ ಎಲ್ಲರೂ ಸಾಯುವುದಿಲ್ಲ. ಆದ್ದರಿಂದ ಕೋವಿಡ್‌ 19 ಬಗ್ಗೆ ಆತಂಕ ಮತ್ತು ಭಯ ಬೇಡವೇ ಬೇಡ...’

ಡಾ.ಬಿ.ಬಿ. ಹುನಗುಂದ

ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಬಿ.ಬಿ. ಹುನಗುಂದ ಅವರ ಸ್ಪಷ್ಟ ಮಾತಿದು.

ದೇಹದಲ್ಲಿ ಆಗಾಗ ನಿಶಕ್ತಿ ಮತ್ತು ಜ್ವರ ಕಾಣಿಸಿಕೊಂಡ ಕಾರಣ 63 ವರ್ಷದ ಹುನಗುಂದ ಅವರು ಆರಂಭದಲ್ಲಿ ಮನೆಯಲ್ಲಿ ಎರಡ್ಮೂರು ದಿನ ಚಿಕಿತ್ಸೆ ಪಡೆದಿದ್ದರು. ಇದರಿಂದ ಚೇತರಿಸಿಕೊಳ್ಳದ ಕಾರಣ ಸ್ವಯಂಪ್ರೇರಣೆಯಿಂದ ಕೊರೊನಾ ಪರೀಕ್ಷೆಗೆ ಒಳಗಾದಾಗ ಅವರಿಗೆ ಸೋಂಕು ಇರುವುದು ದೃಢಪಟ್ಟಿತು. ಹತ್ತು ದಿನಗಳ ಚಿಕಿತ್ಸೆ ಮತ್ತು 14 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಅವರು ಜುಲೈ 27ರಂದು ಪೂರ್ಣಗೊಳಿಸಿದ್ದಾರೆ.

ADVERTISEMENT

ನಾನು ವೈದ್ಯನಾಗಿದ್ದರಿಂದ ಸೋಂಕು ಹೇಗೆ ಹರಡಬಹುದು; ಇದನ್ನು ತಪ್ಪಿಸಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಜ್ಞಾನವಿತ್ತು. ಅದಕ್ಕೆ ಬೇಕಾದ ಎಲ್ಲ ಎಚ್ಚರಿಕೆಗಳನ್ನೂ ತೆಗೆದುಕೊಂಡರೂ ಸೋಂಕು ಹೇಗೆ ತಗುಲಿತು ಎನ್ನುವುದೇ ಗೊತ್ತಾಗಲಿಲ್ಲ. ಕೊರೊನಾ ಇದೆ ಎಂಬುದು ಖಚಿತವಾದಾಗ ‘ಸೋಂಕಿಗೆ ಹೆದರುವ ಅಗತ್ಯವೇ ಇಲ್ಲ’ ಎಂದು ನನ್ನ ಒಳಮನಸ್ಸಿಗೆ ಗಟ್ಟಿಯಾಗಿ ಹೇಳಿಕೊಂಡೆ ಎಂದರು.

ಕೋವಿಡ್‌ನಿಂದ ಎಲ್ಲರೂ ಸಾಯುವುದಿಲ್ಲ. ಭಾರತದಲ್ಲಿ ಈ ಸೋಂಕಿನಿಂದ ಸಾಯುವವರ ಪ್ರಮಾಣ ಬಹಳ ಕಡಿಮೆಯಿದೆ. ಬೇರೆ, ಬೇರೆ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟವರಿದ್ದಾರೆ. ಆದರೂ, ಇದರ ಬಗ್ಗೆ ಜನರಿಗೆ ವಿನಾಕಾರಣ ಭೀತಿಯಿದೆ. ಜ್ವರ, ಕೆಮ್ಮು ಹಾಗೂ ನೆಗಡಿಯಂತೆ ಅತ್ಯಂತ ಸಾಮಾನ್ಯ ರೋಗವಿದು. ಸೋಂಕು ತಗುಲಿದ ಬಳಿಕ ಮಾನಸಿಕವಾಗಿ ಮನಸ್ಸು ಗಟ್ಟಿಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಆಸ್ಪತ್ರೆಯಿಂದ ಹೊರಬರುವಾಗ ಅಲ್ಲಿನ ವೈದ್ಯರು ಹೇಳುವ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೋಂ ಕ್ವಾರಂಟೈನ್ ಅವಧಿಯಲ್ಲಿ ಕಡ್ಡಾಯವಾಗಿ ಮನೆಯಲ್ಲೇ ಇರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.