ADVERTISEMENT

ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 15:33 IST
Last Updated 13 ಫೆಬ್ರುವರಿ 2022, 15:33 IST
 ಶಾಸಕ ಜಮೀರ್‌ ಅಹ್ಮದ್‌ ಖಾನ್‌
ಶಾಸಕ ಜಮೀರ್‌ ಅಹ್ಮದ್‌ ಖಾನ್‌   

ಹುಬ್ಬಳ್ಳಿ: ಗೋಷಾ ಮತ್ತು ಪರದಾ ಪದ್ಧತಿಯನ್ನು ಅನುಸರಿಸದೇ ಇರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿವೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಎಂದರೆ ಪರದಾ ಪದ್ಧತಿಯಾಗಿದೆ. ಋತುಮತಿಯರಾದ ಯುವತಿಯರ ಸೌಂದರ್ಯವನ್ನು ಮುಚ್ಚಿಡಲು ಈ ಪದ್ಧತಿಯನ್ನು ಲಗಾಯ್ತಿನಿಂದಲೂ ಬಳಸಲಾಗುತ್ತದೆ. ಇದು ನಮ್ಮ ಧರ್ಮದಲ್ಲಿ ಕಡ್ಡಾಯ ಅಂತೇನೂ ಇಲ್ಲ. ಆದರೆ ಮಹಿಳೆಯರ ಸುರಕ್ಷೆಗಾಗಿ ಇದನ್ನು ಬಳಸಲಾಗುತ್ತದೆ. ಬೇಡ ಎಂದವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಾರೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಹಿಜಾಬ್‌ ಧರಿಸದೇ ಇರುವುದರಿಂದಲೇ ಅತ್ಯಾಚಾರಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು.

‘ನೂರಾರು ವರ್ಷಗಳಿಂದ ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುತ್ತ ಬಂದಿದ್ದಾರೆ. ಆದರೆ, ಕಾಲೇಜಿನಲ್ಲಿ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಬಂದಂದಿನಿಂದ ಈ ಗೊಂದಲ ಆರಂಭವಾಗಿದೆ. ಮಕ್ಕಳ ಮೂಲಕ ಬಿಜೆಪಿ ಜಾತಿ ಬೀಜ ಬಿತ್ತಿಸಿ ರಾಜಕೀಯ ಮಾಡುತ್ತಿದೆ’ ಎಂದು ಶಾಸಕ ಜಮೀರ್‌ ಅಹ್ಮದ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಎಂದಿಗೂ ಮತ ಯಾಚಿಸಿಲ್ಲ. ಹಿಂದೂ–ಮುಸ್ಲಿಂ ನಡುವೆ ಒಡಕು ತಂದೇ ಅವರು ಗೆದ್ದು ಬರುತ್ತಿದ್ದಾರೆ. ಹಿಜಾಬ್‌ ಧರಿಸುವುದು ಮುಸ್ಲಿಮರ ಮೂಲ ಹಕ್ಕು. ನ್ಯಾಯಾಲಯಕ್ಕಿಂತ ದೊಡ್ಡವರು ಯಾರೂ ಇಲ್ಲ. ಹಿಜಾಬ್‌ ವಿಷಯ ಇದೀಗ ನ್ಯಾಯಾಲಯದಲ್ಲಿದೆ. ಅಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.