ADVERTISEMENT

ಧಾರವಾಡ: ಯಮನೂರು ಗೋಳು ಕೇಳೋರು ಯಾರು?

ತುಂಬಿರುವ ಚರಂಡಿ, ಬಲಿಕೊಟ್ಟ ಪ್ರಾಣಿಗಳ ಮೂಳೆ, ಮಾಂಸ, ದುರಸ್ತಿ ಕಾಣದ ರಸ್ತೆ

ಇ.ಎಸ್.ಸುಧೀಂದ್ರ ಪ್ರಸಾದ್
Published 13 ಜುಲೈ 2019, 19:30 IST
Last Updated 13 ಜುಲೈ 2019, 19:30 IST
ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ಮಹಿಳಾ ಶೌಚಾಲಯದ ಶೌಚಗುಂಡಿ ತುಂಬಿರುವುದರಿಂದ ಅದು ಹೊರಕ್ಕೆ ಹರಿಯುತ್ತಿದೆ
ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ಮಹಿಳಾ ಶೌಚಾಲಯದ ಶೌಚಗುಂಡಿ ತುಂಬಿರುವುದರಿಂದ ಅದು ಹೊರಕ್ಕೆ ಹರಿಯುತ್ತಿದೆ   

ಧಾರವಾಡ: ಕಸದರಾಶಿಯಿಂದ ಗಬ್ಬು ನಾರುತ್ತಿರುವ ಗಟಾರ, ತುಂಬಿ ಹರಿಯುತ್ತಿದೆ ಮಹಿಳೆಯರ ಶೌಚಾಲಯ, ದೇವರದರ್ಶನಕ್ಕೆ ಬಂದವರಿಗೆ ಅಡುಗೆ ಮಾಡಿ ಊಟ ಮಾಡಲು ಸೂಕ್ತ ಜಾಗವಿಲ್ಲದ ಕಾರಣ ಆಹಾರ ತ್ಯಾಜ್ಯದ ಘಟಕವಾಗಿರುವ ಊರು. ಕಲುಶಿತಗೊಂಡಿರುವ ಊರಿನಲ್ಲಿ ಸೊಳ್ಳೆ, ನೊಣಗಳಕಾಟ...

ಸಲಕ ರೋಗ ನಿವಾರಣೆ, ಇಷ್ಟಾರ್ಥ ನೆರವೇರಿಸುವ ನವಲಗುಂದ ತಾಲ್ಲೂಕಿನ ಯಮನೂರಿನ ಚಾಂಗದೇವರು ನೆಲೆಸಿರುವ ಊರಿನಲ್ಲಿ ಅನಾರೋಗ್ಯಕರ ದೃಶ್ಯ ಕಂಡುಬರುತ್ತಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಇಲ್ಲಿ ಚಾಂಗದೇವರ ಉರುಸ್ ನಡೆಯುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಜನ ಇಲ್ಲಿಗೆ ಬಂದು, ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿದ ನಂತರ ಉಟ್ಟಬಟ್ಟೆಯನ್ನು ಅಲ್ಲೇ ಬಿಡುವುದು ವಾಡಿಕೆ. ಇದರಿಂದಾಗಿ ಬೆಣ್ಣಿಹಳ್ಳಿ ಸಂಪೂರ್ಣ ಕಲುಶಿತಗೊಂಡಿದೆ. ಉಂಡು, ಬಿಸಾಡಿದ ಮಾಂಸದೂಟದ ತ್ಯಾಜ್ಯದಿಂದಾಗಿ ಇಡೀ ಊರೇ ಗಬ್ಬು ನಾರುತ್ತಿದೆ.

ಗ್ರಾಮದ ಪರಸ್ಥಿತಿ ಕುರಿತು ವಿವರಿಸಿದ ಜಿ.ಎಂ.ಸವದತ್ತಿ, ‘ಜಾತ್ರೆಯ ನಂತರವೂ ಪ್ರತಿ ಗುರುವಾರ ಹಾಗೂ ಭಾನುವಾರ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಟ್ರ್ಯಾಕ್ಟರ್‌ ಹಾಗೂ ಇನ್ನಿತರ ವಾಹನಗಳಲ್ಲಿ ಬರುವ ಜನರು ಎರಡು ಮೂರು ದಿನ ಗ್ರಾಮದಲ್ಲೇ ತಂಗುತ್ತಾರೆ. ಇವರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಬಯಲಲ್ಲಿ ಮಲಮೂತ್ರ ವಿಸರ್ಜಿಸುತ್ತಾರೆ. ಇದರಿಂದಲೂ ಗ್ರಾಮದಲ್ಲಿ ನೊಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದು ಅನಾರೋಗ್ಯಕ್ಕೂ ಕಾರಣವಾಗಿದೆ’ ಎಂದರು.

ADVERTISEMENT

‘ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ಸ್ವಚ್ಛಗೊಳಿಸುವ ಕೆಲಸವಾಗುತ್ತಿಲ್ಲ. ಮಹಿಳೆಯರಿಗಾಗಿ ನಿರ್ಮಿಸಿರುವ ಶೌಚಾಲಯ ತುಂಬಿದೆ. ಅಲ್ಲಿಗೆ ಯಾರೂ ಹೋಗುವಂತಿಲ್ಲ. ಹೊಲಗಳಲ್ಲಿ ಬಲಿ ನೀಡಿದ ಪ್ರಾಣಿಗಳ ಮೂಳೆ, ಮಾಂಸಗಳು ಇರುತ್ತವೆ. ಅವುಗಳ ವಿಲೇವಾರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಗ್ರಾಮದ ಕೆಲ ರಸ್ತೆಗಳು ತೀರಾ ಶೋಚನೀಯವಾಗಿದೆ. ಲಕ್ಷಾಂತರ ಭಕ್ತರು ಬರುವ ಊರಿಗೆ ಕನಿಷ್ಠ ಮೂಲಸೌಕರ್ಯವನ್ನಾದರೂ ಕಲ್ಪಿಸಬೇಕಾದ ಆಡಳಿತ ಕಣ್ಮುಚ್ಚಿ ಕುಳಿತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ವಿಷಯ ಕುರಿತು ಮೇಲಾಧಿಕಾರಿಗಳು, ಮಾನವ ಹಕ್ಕು ಆಯೋಗಕ್ಕೂ ಪತ್ರ ಬರೆಯಲಾಯಿತು. ಆದರೆ ಯಾರೊಬ್ಬರೂ ಈ ಗ್ರಾಮದ ದುಃಸ್ಥಿತಿಗೆ ಪರಿಹಾರ ಒದಗಿಸಲಿಲ್ಲ. ಇಂಥ ಅನಾರೋಗ್ಯಕರ ವಾತಾವರಣದಲ್ಲಿ ಜನ ಬದುಕುವುದಾದರೂ ಹೇಗೆ? ಹಾಗಿದ್ದರೆ ನ್ಯಾಯಕ್ಕಾಗಿ ಯಾರ ಬಳಿ ಹೋಗ ಕೇಳಬೇಕು? ಎಂಬ ಪ್ರಶ್ನೆ ಎದುರಾಗಿದೆ’ ಎಂದು ಸವದತ್ತಿ ಅವರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಧಿಕಾರಿ ನಾರಾಯಣ ರಿತ್ತಿ, ‘ಅಂಗಡಿಗಳ ಹರಾಜಿನಿಂದ ₹23ಲಕ್ಷ ಸಂಗ್ರಹವಾಗಿತ್ತು. ಅದರಲ್ಲಿ ಎರಡು ವರ್ಷಗಳ ಹಿಂದೆ ಹಳ್ಳದ ದಂಡೆಯಲ್ಲೇ ಎರಡು ಎಕರೆ ಜಾಗ ಖರೀದಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ನಾನಗೃಹ, ಶೌಚಗೃಹ ಇತ್ಯಾದಿ ಕಟ್ಟಿಸಬೇಕೆಂದಿದ್ದೇವೆ. ಅನುದಾನ ಮಂಜೂರು ಆಗುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ’ ಎಂದರು.

‘ಸದ್ಯ ವಾರಕ್ಕೆ ಎರಡು ದಿನ ಇಲ್ಲಿಗೆ ಭಕ್ತಾಧಿಗಳು ಬರುವುದರಿಂದ ಶೌಚಗುಂಡಿಗಳು ತುಂಬಿತ್ತಿರುತ್ತವೆ. ಇದನ್ನು ಶುಚಿಗೊಳಿಸಲು ಯಂತ್ರ ಹಾಗೂ ಮೂವರು ಸಿಬ್ಬಂದಿ ಇದ್ದಾರೆ. ಅವರಿಂದಲೇ ಶುಚಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.