ADVERTISEMENT

1921ರ ಗೋಲಿಬಾರ್‌: ಅಸಹಕಾರ ಚಳವಳಿ; ಶತಮಾನದ ನೆನಪು

ಹುತಾತ್ಮರಾದ ಮೂವರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:27 IST
Last Updated 7 ಸೆಪ್ಟೆಂಬರ್ 2025, 7:27 IST
ಧಾರವಾಡದ ಜಕನಿ ಭಾವಿ ಎದುರು ನಿರ್ಮಿಸಲಾದ ಹುತಾತ್ಮರ ಸ್ಮಾರಕ ಹಿಂದುಗಡೆ ಸಂವಿಧಾನದ ಪೀಠಿಕೆ ಉಲ್ಲೇಖಿಸಲಾಗಿದೆ
ಧಾರವಾಡದ ಜಕನಿ ಭಾವಿ ಎದುರು ನಿರ್ಮಿಸಲಾದ ಹುತಾತ್ಮರ ಸ್ಮಾರಕ ಹಿಂದುಗಡೆ ಸಂವಿಧಾನದ ಪೀಠಿಕೆ ಉಲ್ಲೇಖಿಸಲಾಗಿದೆ   

1919ರಲ್ಲಿ ಟರ್ಕಿ ದೇಶದ ವಿರುದ್ಧ ಬ್ರಿಟಿಷ್ ನೀತಿ ಮತ್ತು ಒಂದನೇ ಮಹಾಯುದ್ಧದ ವೇಳೆ ತುರ್ಕಿಯ ಖಲೀಫ್‌ನ ಅಂತ್ಯವನ್ನು ಖಂಡಿಸಿ ಭಾರತೀಯ ಮುಸಲ್ಮಾನರು ಖಿಲಾಫತ್ ಚಳವಳಿ ಆರಂಭಿಸಿದರು. ಅದೇ ರೀತಿ 1920ರಲ್ಲಿ ಬ್ರಿಟಿಷರ ಆಳ್ವಿಕೆ ನೀತಿ ಖಂಡಿಸಿ ಗಾಂಧೀಜಿ ನೇತೃತ್ವದಲ್ಲಿ ಅಸಹಕಾರ ಚಳವಳಿ ಆರಂಭಗೊಂಡಿತು. ಇದಕ್ಕೂ ಮೊದಲೇ, ಧಾರವಾಡದಲ್ಲಿ ಖಿಲಾಫತ್‌ ಚಳವಳಿ ಆಚರಿಸಲು ಹಿಂದೂ ಹಾಗೂ ಮುಸಲ್ಮಾನರು ಸೇರಿ ಒಮ್ಮತದಿಂದ 26 ಜನ ಪ್ರತಿಭಟನೆ ನಡೆಸಲು ಕರಪತ್ರ ಹೊರಡಿಸಿದರು. 

ಆಗ ಧಾರವಾಡಕ್ಕೆ ಎಚ್.ಎಲ್.ಪೇಂಟರ್ ಜಿಲ್ಲಾಧಿಕಾರಿಯಾಗಿ ಆಗಿದ್ದರು. ಆತ ಖಿಲಾಫತ್‌ ಚಳವಳಿಯ ಇಬ್ಬರು ಸ್ವಯಂ ಸೇವಕರಿಗೆ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದ. ‘ಬ್ರಿಟಿಷ್ ಸರ್ಕಾರದ ಸಾರಾಯಿ ಮಾರಾಟ ವಿರೋಧಿಸಿ’ ಧಾರವಾಡದ ಪೊಲೀಸ್ ಠಾಣೆ ಎದುರು (ಜಕನಿ ಭಾವಿಯ ಎದುರಿನ ಸಾರಾಯಿ ಅಂಗಡಿ) 1921ರ ಜೂನ್ 31ರಂದು ಹಲವರು ಪ್ರತಿಭಟನೆ ನಡೆಸಲು ಮುಂದಾದರು. ‘ಪ್ರತಿಭಟನಾಕಾರರು ಸರಾಯಿ ಅಂಗಡಿ ಸುಡಲು ಯತ್ನಿಸಿದರು’ ಎಂದು ಸುಳ್ಳು ಕಾರಣ ನೀಡಿ ಗುಂಡಿನ ದಾಳಿ ನಡೆಸಲು ಜಿಲ್ಲಾಧಿಕಾರಿ ಆದೇಶಿಸಿದ.

ಅಂದಿನ ಸೇನೆಯ ಮುಖ್ಯಾಧಿಕಾರಿ(ಫೌಜದಾರ) ಶಿವಲಿಂಗಪ್ಪ ಎಂಬಾತನ ಗುಂಡಿನ ದಾಳಿಗೆ ಮಲಿಕಸಾಬ್ ಬಿನ್ ಮರ್ದಾನ್ ಸಾಬ್, ಗೌಸಸಾಬ್ ಬಿನ್ ಖಾದರ್ ಸಾಬ್ ಮತ್ತು ಅಬ್ದುಲ್ ಖಾದರ್ ಚೌಕತಾಯಿ ಮರಣ ಹೊಂದಿದರು. 29 ಮಂದಿ ಗಾಯಗೊಂಡರು. ಆಗ ಗಾಯಗೊಂಡ ವ್ಯಕ್ತಿಗಳ ಮೇಲೆ ಸುಳ್ಳು ಪ್ರಕರಣ ದಾಖಲಾಯಿತು. ಆಗ ಕೈದಿಗಳನ್ನು ಲಾಲಾ ಲಜಪತ್‌ರಾಯ್‌ ಭೇಟಿಯಾದರು. ನಂತರ ಸಾರ್ವಜನಿಕ ಭಾಷಣ ಮಾಡಿದರು ಎಂಬುದು ಧಾರವಾಡ ಗ್ಯಾಸೆಟಿಯರ್‌ನಲ್ಲಿ ಉಲ್ಲೇಖವಿದೆ.    

ADVERTISEMENT

ಬ್ರಿಟಿಷ್ ದಬ್ಬಾಳಿಕೆಯಿಂದ ಪ್ರಾಣ ಕಳೆದುಕೊಂಡ ಮೂವರು ಹುತಾತ್ಮರ ನೆನಪಿನಲ್ಲಿ ಧಾರವಾಡದಲ್ಲಿ ಸ್ಮಾರಕವಿದೆ. ಈ ಘಟನೆ ನಡೆದು 2021ಕ್ಕೆ ಶತಮಾನ ತುಂಬಿದೆ. ಪ್ರತಿ ವರ್ಷ ಜುಲೈ 1ರಂದು ಹುತಾತ್ಮರಿಗೆ ಸಾಮಾಜಿಕ ಕಾರ್ಯಕರ್ತರು ನಮನ ಸಲ್ಲಿಸುತ್ತಾರೆ.

ಖಿಲಾಪತ್‌ ಹಾಗೂ ಅಸಹಕಾರ ಚಳವಳಿ ಒಂದುಗೂಡಿಸಿದ ಗಾಂಧೀಜಿ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಖಿಲಾಫತ್‌ ಕಮೀಟಿಯಲ್ಲಿ ಧಾರವಾಡದಿಂದ ಈ ಮೂವರು ಸಕ್ರಿಯ ಕಾರ್ಯಕರ್ತರಾಗಿದ್ದು ಇವರನ್ನು ಉದ್ದೇಶ ಪೂರ್ವಕವಾಗಿ ಬ್ರಿಟಿಷ್‌ ಸರ್ಕಾರ ಹತ್ಯೆಮಾಡಿದೆ.
– ಶಿವಾನಂದ ಶೆಟ್ಟರ್‌, ನಿವೃತ್ತ ಪ್ರಾಧ್ಯಾಪಕರು ಕವಿವಿ ಧಾರವಾಡ

‘ಜಿಲ್ಲಾಡಳಿತ ಗಮನ ಹರಿಸಲಿ’

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 25 ವರ್ಷಗಳ ಬಳಿಕ ಸ್ವಾತಂತ್ರ್ಯ ದಿನದ ಸವಿನೆನಪಿಗಾಗಿ ಈ ಸ್ಮಾರಕವನ್ನು ಕೇಂದ್ರ ಸರ್ಕಾರ ನಿರ್ಮಿಸಿತು. 2000 ಇಸ್ವಿಯಿಂದ ಪ್ರತಿವರ್ಷ ಹುತಾತ್ಮರಿಗೆ ನಮನ ಸಲ್ಲಿಸಲಾಗುತ್ತದೆ. ಧಾರವಾಡದ ಹೊಸಯಲ್ಲಾಪುರದಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿ ಈ ಮೂವರ ಸಮಾಧಿಗಳು ಇವೆ.

‘ಸ್ಮಾರಕ ಮತ್ತು ಸಮಾಧಿಗಳು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಸಾರುವ ಕುರುಹುಗಳಾಗಿವೆ. ಸ್ಮಾರಕ ಸುತ್ತಲೂ ಹುತಾತ್ಮರ ವಿವರ ದಾಖಲಾಗಬೇಕು. ಸಮಾಧಿ ರಕ್ಷಣೆಗೆ ಆದ್ಯತೆ ಸಿಗಬೇಕು. ಪ್ರತಿ ವರ್ಷ ಜುಲೈ 1ರಂದು ಜಿಲ್ಲಾಡಳಿತವು ಹುತಾತ್ಮರಿಗೆ ಗೌರವ ಅರ್ಪಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಉದಯ ಯಂಡಿಗೇರಿ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.