ADVERTISEMENT

ಹುಬ್ಬಳ್ಳಿ: ರೋಗಿಗಳಿಗಷ್ಟೇ ಅಲ್ಲ; ವೈದ್ಯರಿಗೂ ಒತ್ತಡ!

ಕೋವಿಡ್‌ 2ನೇ ಅಲೆಯ ಬಳಿಕ ರೋಗಿಗಳ ಸಂಖ್ಯೆ ಹೆಚ್ಚಳ: ರೋಗಿಗಳ ಸಾವಿನ ಪ್ರಮಾಣದಲ್ಲಿಯೂ ಏರಿಕೆ

ರಾಮಕೃಷ್ಣ ಸಿದ್ರಪಾಲ
Published 7 ಜೂನ್ 2021, 2:25 IST
Last Updated 7 ಜೂನ್ 2021, 2:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೋವಿಡ್‌–19 ನಿಂದಾಗಿ ಜನರ ದೈಹಿಕ, ಮಾನಸಿಕ ಒತ್ತಡಗಳೂ ಹೆಚ್ಚಿವೆ. ಆರೋಗ್ಯ ಕ್ಷೇತ್ರದಲ್ಲಿಯಂತೂ ಹಿಂದೆಂದಿಗಿಂತ ಹೆಚ್ಚಿನ ಒತ್ತಡ ಕಂಡು ಬರುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ರೋಗಿಗಳು ಪರದಾಡುತ್ತಿರುವುದು ಒಂದೆಡೆ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಕೂಡ ಅಷ್ಟೇ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೋವಿಡ್‌ ಪರಿಸ್ಥಿತಿ ಉಲ್ಬಣಿಸಿದಂತೆ ರೋಗಿಗಳ ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. 2ನೇ ಅಲೆಯ ಬಳಿಕ ದೇಶದಲ್ಲಿ ಉಲ್ಬಣಗೊಂಡಿರುವ ರೋಗ, ಪ್ರತಿದಿನ ಸಾವಿನ ಪ್ರಮಾಣದಲ್ಲಿ ಏರಿಕೆ, ಔಷಧಿಗಳ ಕೊರತೆ, ಸೌಲಭ್ಯ, ಎಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ಒತ್ತಡ, ಹೈ ರಿಸ್ಕ್‌ ವಾತಾವರಣ, ಕುಟುಂಬದ ಸದಸ್ಯರಿಂದ ಪ್ರತ್ಯೇಕವಾಸ...ಇತ್ಯಾದಿ ಕಾರಣಗಳಿಂದಾಗಿ ಚಿಕಿತ್ಸೆ ನೀಡುವ ವೈದ್ಯರು ಕೂಡ ಒತ್ತಡದಲ್ಲಿದ್ದಾರೆ. ದಿನದ 24 ಗಂಟೆ ದುಡಿಯುವ ವೈದ್ಯರು ಬಿಡುವಿಲ್ಲದೇ ದಣಿದಿದ್ದಾರೆ. ಎಷ್ಟೋ ವೈದ್ಯರು ಪ್ರತ್ಯೇಕವಾಸದಿಂದಾಗಿ ವಾರ, ತಿಂಗಳುಗಟ್ಟಲೆ ಕುಟುಂಬದ ಸದಸ್ಯರ ಮುಖ ನೋಡುತ್ತಿಲ್ಲ.

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ಕೋವಿಡ್‌ ವಾರ್ಡ್‌ಗಳಿವೆ. ದಿನದ 24 ಗಂಟೆಯಲ್ಲಿ ನಾಲ್ಕು ಶಿಫ್ಟ್‌ನಲ್ಲಿ ತಲಾ 30 ವೈದ್ಯರು, ಅಷ್ಟೇ ಸಂಖ್ಯೆಯ ನರ್ಸ್‌ (6 ತಾಸಿನ ಶಿಫ್ಟ್) ಕೋವಿಡ್‌ ವಾರ್ಡ್ ನೋಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ನೂರಾರು ವೈದ್ಯರಿಗೆ ದಿನವಿಡೀ ಕೆಲಸ...ಇಲ್ಲಿ ಕೆಲಸ ಮಾಡುತ್ತಲೇ ಪಾಸಿಟಿವ್‌ ಆಗಿ, ಕ್ವಾರಂಟೈನ್‌ ಆಗಿ, ಹುಷಾರಾಗಿ ಮರಳಿದ ವೈದ್ಯರು ಅನೇಕ.

ADVERTISEMENT

ಹುಬ್ಬಳ್ಳಿ ಕಿಮ್ಸ್‌ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಈಶ್ವರ ಹಸಬಿ ಪ್ರಕಾರ, ವೈದ್ಯರು ಮೊದಲಿಗಿಂತ ಹೆಚ್ಚು ಒತ್ತಡದಲ್ಲಿ ರೋಗಿಗಳನ್ನು ನೋಡಿಕೊಳ್ಳಬೇಕಾಗಿದೆ. ಆದರೆ ರೋಗಿಗಳು ಗುಣಮುಖರಾಗಿ ಅವರ ಮೊಗದಲ್ಲಿ ನಗು ಮೂಡಿದರೆ ಒತ್ತಡ ಕಡಿಮೆಯಾಗಿ ನಮ್ಮ ಮನಸ್ಸು ಹಗುರಾಗುತ್ತದೆ ಎನ್ನುತ್ತಾರೆ.

ನವನಗರದ ಕ್ಯಾನ್ಸರ್‌ ಆಸ್ಪತ್ರೆ ಮುಖ್ಯಸ್ಥ, ತಜ್ಞ ಡಾ. ಬಿ.ಆರ್‌.ಪಾಟೀಲ ಅವರು ವೈದ್ಯರು ಎದುರಿಸುವ ಒತ್ತಡವನ್ನು ಹೀಗೆ ವಿಶ್ಲೇಷಿಸಿದರು. ಮುಖ್ಯವಾಗಿ ರೋಗಿಗಳು ಲಾಕ್‌ಡೌನ್‌, ಓಡಾಟದ ಸಮಸ್ಯೆ,ರೋಗ ಭೀತಿ ಇತ್ಯಾದಿ ಕಾರಣಗಳಿಂದಾಗಿ ತಡವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆ ನೀಡುವುದೂ ಕಷ್ಟ. ನೀಡಿದರೂ ಪರಿಣಾಮದ ಬಗ್ಗೆ ಸಂದೇಹ. ಜೊತೆಗೆ ಕೋವಿಡ್‌ ಸಮಸ್ಯೆ. ಇದೊಂದು ಹೊಸ ಕಾಯಿಲೆ. ಯಾರಿಗೂ ಹೀಗೇ ಅಂತ ಹೇಳುವುದೇ ಕಷ್ಟ. ರೋಗ ಉಲ್ಬಣಿಸಿದರೆ ಕೂಡಲೇ ಅವರಿಗೆ ಆಮ್ಲಜನಕ ಸಹಿತ ಹಾಸಿಗೆ, ವೆಂಟಿಲೇಟರ್‌ ಇತ್ಯಾದಿ ಕೆಲವೊಮ್ಮೆ ಅಲಭ್ಯವಾಗುತ್ತಿದೆ. ಜೊತೆಗೆ ವೈದ್ಯರು ಕೂಡ ಪ್ರತಿದಿನ ಪಿಪಿಇ ಕಿಟ್‌ ಧರಿಸಿ ರೋಗಳಿಗೆ ಚಿಕಿತ್ಸೆ ನೀಡುವುದು ಕೂಡ ಕಷ್ಟಕರವೇ. ಇದು ವೈದ್ಯರಿಗೂ ಒತ್ತಡ ಸೃಷ್ಟಿಸುತ್ತಿದೆ ಎನ್ನುತ್ತಾರೆ.

ಧಾರವಾಡದ ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಹೇಳುವ ಪ್ರಕಾರ, ‘ರೋಗಿಗಳಿಗೆ ಒಳ್ಳೆದಾಗಬೇಕು ಎಂದು ವೈದ್ಯರು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಹೈ ರಿಸ್ಕ್‌ ವಾತಾವರಣ, ಪಿಪಿಇ ಕಿಟ್‌ ಧರಿಸುವುದು, ಕುಟುಂಬದಿಂದ ದೂರ ಇರುವುದು, ವೈದ್ಯರ ಮೇಲೆ ಅತಿಯಾದ ನಿರೀಕ್ಷೆ ಇವೆಲ್ಲವುಗಳಿಂದ ಒತ್ತಡ ಆಗಿದೆ. ಅಷ್ಟಕ್ಕೂ ವೈದ್ಯರು ಕೂಡ ಮನುಷ್ಯರು ತಾನೇ?’ ಎನ್ನುತ್ತಾರೆ.

’ಮೊದಲಾಗಿದ್ದರೆ 12 ತಾಸು ಆರಾಂ ಆಗಿ ಕೆಲಸ ಮಾಡುತ್ತಿದ್ದೆವು. ಈಗ ಪಿಪಿಇ ಕಿಟ್‌ ಧರಿಸಿ ನಿರಂತರ 6–8 ತಾಸು ಕೆಲಸ ಮಾಡುವುದೇ ತ್ರಾಸದಾಯಕ’ ಎನ್ನುತ್ತಾರೆನವನಗರ ಕ್ಯಾನ್ಸರ್‌ ಆಸ್ಪತ್ರೆ ಮುಖ್ಯಸ್ಥ ಡಾ.ಬಿ.ಆರ್‌.ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.