ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 20 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದೆ. ಇದರಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಶೇ 50ರಷ್ಟು ಪ್ರಗತಿ ಸಾಧಿಸಿ, ಜಿಲ್ಲೆಯು ರಾಜ್ಯದಲ್ಲೇ 5ನೇ ಸ್ಥಾನದಲ್ಲಿದೆ. ತೋಟಗಾರಿಕೆ, ಕೃಷಿ, ರೇಷ್ಮೆ, ಸಾಮಾಜಿಕ ಅರಣ್ಯ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗಳಿಂದ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ಕೊಡಲಾಗುತ್ತಿದೆ.
11.46 ಲಕ್ಷ ಮಾನವ ದಿನಗಳ ಸೃಜನೆ
‘ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ವೈಯಕ್ತಿಕ ಹಾಗೂ ಸಮುದಾಯದ ಆಧಾರಿತ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ನಿಗದಿತ ಗುರಿಯಲ್ಲಿ ಏಪ್ರಿಲ್ 2024ರಿಂದ ಸೆ.22, 2025ರವರೆಗೆ ಒಟ್ಟು 11.46 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದರೊಂದಿಗೆ ಶೇ 50ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು.
‘ಸ್ತ್ರೀ ಚೇತನ’ ಹಾಗೂ ‘ದುಡಿಯೋಣ ಬಾ’ ಅಭಿಯಾನದ ಅಡಿಯಲ್ಲಿಯೂ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಹಿಳಾ ಕೂಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ 146 ಗ್ರಾಮ ಪಂಚಾಯಿತಿಗಳಲ್ಲಿ ‘ಸ್ತ್ರೀ ಚೇತನ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕರಪತ್ರ ವಿತರಣೆ, ಮನೆ ಮನೆ ಭೇಟಿ, ವಾರ್ಡ್‌ಗಳಲ್ಲಿ ಸಭೆ ನಡೆಸುವ ಮೂಲಕ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳೆಯರು ಭಾಗವಹಿಸಿ, ಅವರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ.
ಯೋಜನೆಯಡಿ ಒಳಗೊಳ್ಳದೇ ಇರುವ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಸಮೀಕ್ಷೆ ಮಾಡಿ, ಅರ್ಹರಿಗೆ ಉದ್ಯೋಗ ಚೀಟಿ ನೀಡಿ ಅವರಿಗೆ ‘ದುಡಿಯೋಣ ಬಾ’ ಅಭಿಯಾನದ ಅಡಿಯಲ್ಲಿ ನಿರಂತರವಾಗಿ ಕೂಲಿ ಕೆಲಸ ನೀಡಲಾಗುತ್ತಿದೆ. ದುರ್ಬಲ ವರ್ಗದ ಕುಟುಂಬ, ವಿಶೇಷ ಚೇತನರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತಿದೆ.
‘ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸ್ತುತ 1,71,716 ಉದ್ಯೋಗ ಚೀಟಿಗಳನ್ನು ಹೊಂದಿರುವ ನೋಂದಾಯಿತ ಕುಟುಂಬಗಳಿವೆ. ಅದರಲ್ಲಿ 1,36,253 ಜನ ಕೂಲಿ ಕಾರ್ಮಿಕರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಇವರಲ್ಲಿ 176 ಜನ ವಿಶೇಷಚೇತನರೂ ಇದ್ದಾರೆ. ಇವರೆಲ್ಲರಿಗೂ ನರೇಗಾ ಆಸರೆಯಾಗಿದೆ’ ಎಂದು ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು.
ಪ್ರತಿ ತಿಂಗಳು 2 ತಾಲ್ಲೂಕು ಪಂಚಾಯಿತಿಗಳಿಗೆ ಭೇಟಿ ನೀಡಿ ಪಿಡಿಒಗಳ ಸಭೆ ನಡೆಸಿ ನರೇಗಾ ಕಾಮಗಾರಿಗಳ ಪ್ರಗತಿಗೆ ಸೂಚಿಸಲಾಗುತ್ತಿದೆ. ಏಪ್ರಿಲ್ 2026ರೊಳಗೆ ರಾಜ್ಯದಲ್ಲಿ 2ನೇ ಸ್ಥಾನ ಹೊಂದುವ ಗುರಿ ಇದೆಭುವನೇಶ ಪಾಟೀಲ ಸಿಇಒ ಜಿಲ್ಲಾ ಪಂಚಾಯಿತಿ
ಕಳೆದ ವರ್ಷ ‘ನರೇಗಾ’ ಕೂಲಿ ಕಾರ್ಮಿಕರಿಗೆ ₹349 ದಿನಗೂಲಿ ಇತ್ತು. ಪ್ರಸಕ್ತ ಸಾಲಿನ ಏಪ್ರಿಲ್ 1ರಿಂದ ಗಂಡು– ಹೆಣ್ಣಿಗೂ ₹370 ದಿನಗೂಲಿ ಮಾಡಿದ್ದರಿಂದ ಯೋಜನೆಯಡಿ ಕೆಲಸ ಬಯಸಿ ಬರುವವರ ಸಂಖ್ಯೆ ಹೆಚ್ಚಾಗಿದೆ.ಮಲ್ಲಿಕಾರ್ಜುನ ತೊದಲಬಾಗಿ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ
ಶೇ 50ರಷ್ಟು ಪ್ರಗತಿ: ₹36.82 ಕೋಟಿ ವೆಚ್ಚ
‘ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 20 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿತ್ತು. ಇದರಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಶೇ 50ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ ಕೈಗೊಂಡ ಸಮುದಾಯ ಆಧಾರಿತ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ₹38.32 ಕೋಟಿ ವೆಚ್ಚವಾಗಿದೆ. ನರೇಗಾ ಕೂಲಿಕಾರ್ಮಿಕರಿಗೆ ₹36.32 ಕೋಟಿ ಹಾಗೂ ಅರೆ ನುರಿತ ಕಾರ್ಮಿಕರಿಗೆ ₹28 ಲಕ್ಷ ಕೂಲಿ ಪಾವತಿಸಲಾಗಿದೆ. ₹1.60 ಕೋಟಿ ಸಾಮಗ್ರಿಗಳ ಖರೀದಿ ಮೊತ್ತ ಸಂದಾಯ ಮಾಡಲಾಗಿದೆ. ‘ನರೇಗಾ ಕೂಲಿ ಕಾರ್ಮಿಕರಿಗೆ ಸಂಬಂಧಿಸಿದ ಇನ್ನೂ ₹1.63 ಕೋಟಿ ಕೂಲಿ ಮೊತ್ತ. ಅರೆ ಕಾರ್ಮಿಕರಿಗೆ ಸಂಬಂಧಿಸಿದ ₹3.45 ಲಕ್ಷ ಹಾಗೂ ₹1.62 ಕೋಟಿ ಸಾಮಾಗ್ರಿ ಖರೀದಿಗೆ ಸಂಬಂಧಿಸಿದ ಬಾಕಿ ಹಣ ಬರಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ತಿಳಿಸಿದರು.
ಯಾವ್ಯಾವ ಕಾಮಗಾರಿ?
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಆಯಾ ಸ್ಥಳೀಯ ಪಂಚಾಯಿತಿಗಳಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಕೆರೆ ಹೂಳೆತ್ತುವುದು ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದು–ಕೃಷಿ ಹೊಂಡ ಶಾಲಾ ಕಾಂಪೌಂಡ್–ಕೊಠಡಿ ಅಂಗನವಾಡಿ ಕೇಂದ್ರದ ಕಟ್ಟಡದ ನಿರ್ಮಾಣ ಶಾಲಾ ಮೈದಾನ ಸಮತಟ್ಟುವಿಕೆ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.